Sunday, June 28, 2009

ಪಾಪಣ್ಣನಾಗಿ ಗೆದ್ದ ಚಿಟ್ಟಾಣಿ - ಯಕ್ಶ ಮುಂಗಾರಿಗೊಂದು ಹಿನ್ನುಡಿ

ಚಿಟ್ಟಾಣಿಯವರ ಅಪರೂಪದ ಪಾಪಣ್ಣ ಪಾತ್ರದ ಆಕರ್ಶಣೆಯೊಂದಿಗೆ ಅನಾವರಣಗೊಂದ ಸಾಲಿಗ್ರಾಮ ಮೇಳದ ಪಾಪಣ್ಣ ವಿಜಯ - ಚಂದ್ರಹಾಸ ಪ್ರಸಂಗ ಭಾರೀ ಪ್ರೇಕ್ಶಕ ವರ್ಗವನ್ನು ಸೆಳೆಯಿತು. ಚಿಟ್ಟಾಣಿಯವರ ಪಾಪಣ್ಣ, ಶಶಿಕಾಂತ ಶೆಟ್ಟಿಯವರ ಗುಣಸುಂದರಿ, ಕಣ್ಣಿಯವರ ನಿಜ ಪಾಪಣ್ಣ ಪ್ರೇಕ್ಶಕರನ್ನು ರಂಜಿಸುವಲ್ಲಿ ಸಫ಼ಲವಾಯಿತಾದರೂ, ಉಳಿದ ಪಾತ್ರಗಳು ಹವ್ಯಾಸಿ ಕಲಾವಿದರ ಮಟ್ಟದಲ್ಲೆ ಉಳಿದು ಪ್ರದರ್ಶನ ಒಟ್ಟಂದಕ್ಕೆ ಕುಂದುಂಟಾಯಿತು.

ಚಿಟ್ಟಾಣಿ ಯಾವ ಪಾತ್ರಕ್ಕಾದರೂ ನ್ಯಾಯ ಒದಗಿಸಬಲ್ಲ ಅಪರೂಪದ ಕಲಾವಿದ. ಪಾಪಣ್ಣ ವಿಜಯದ ಪಾಪಣ್ಣನಾಗಿ ದೊಡ್ಡ ಹೆಸರು ಮಾಡಿದವರು ತೆಂಕಿನ ಹಿರಿಯ ಹಾಸ್ಯಗಾರರಾದ ಪೆರ್ವೋಡಿ ನಾರಾಯಣ ಭಟ್ಟರು. ಗೂನು ಬೆನ್ನಿನ, ವಿಕಾರ ಮುಖದ ಭಿಕ್ಶುಕನ ಪಾತ್ರ (ಬಹುತೇಕ ಹಾಸ್ಯಗಾರರೇ ನಿರ್ವಹಿಸುವ) ಮಾಡಿ ಸೈ ಎನಿಸಿಕೊಳ್ಳುವುದು ಬಹುಶ ಚಿಟ್ಟಣಿಯವರಂಥ ಅತಿರಥ ಕಲಾತಪಸ್ವಿಗಳಿಗೆ ಮಾತ್ರ ಸಾಧ್ಯವೇನೊ? ಇಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕಿದೆ. ಪೆರ್ವೋಡಿ ನಾರಾಯಣ ಭಟ್ಟರ ಪಾಪಣ್ಣನ ಪಾತ್ರವನ್ನು ಸಾಕಷ್ಟು ಬಾರಿ ನೋಡಿದ ಪ್ರೇಕ್ಷಕರೋರ್ವರು ಚಿಟ್ಟಾಣಿಯವರ ಪಾಪಣ್ಣನ ವೇಶವನ್ನು ಕೊಂಡಾಡಿರುವುದು ಅವರ ಪ್ರತಿಭೆಗೆ ಸಂದ ಗೌರವ.

ಈ ಪ್ರದರ್ಶನದಲ್ಲಿ ಗಮನಿಸಬೇಕದ ಪ್ರಮುಖ ಅಂಶ ಭಾಗವತಿಕೆ. ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಹೆರಂಜಾಲು ಆರಂಭದಲ್ಲಿ ಕೇವಲ ಒಂದು ಘಂಟೆ ಸಮಯ ಭಾಗವತಿಕೆಯ ಶಾಸ್ತ್ರ ಮುಗಿಸಿ ನಿರ್ಗಮಿಸಿದರು. ಆರಂಭದ ಗಣಪತಿ ಸ್ತುತಿ ನಡೆದಾಗ ರಂಗ ಪರದೆ ಇಳಿ ಬಿಟ್ಟಿದ್ದರಿಂದ ಯಾರ್‍ಒ ಭಾಗವತಿಕೆ ಕಲಿಯುತ್ತಿರುವರು ಹಾಡುತಿದ್ದಾರೆ ಎಂದೇ ಎಣಿಸಿದ್ದೆ. ಇಂದಿರೆಗೆ ತಲೆಬಾಗಿ ಪದ್ಯವಂತೂ ಕಾಟಾಚಾರಕ್ಕೆ ಹೇಳಿದಂತಿತ್ತು. ರಂಗ ಪರದೆ ಸರಿದಾಗ ಮೇಳದ ಪ್ರಧಾನ ಭಾಗವತರನ್ನು ಕಂದು ಶಾಕ್ ಆದದ್ದು ಸುಳ್ಳಲ್ಲ. ಮುಂದೆ ರಂಗ ಸಾರಥ್ಯವನ್ನು ವಹಿಸಿಕೊಂಡ ರವಿ ಸೂರಾಲ್ ಆರಂಭದಲ್ಲಿ ಎಡವಿದರೂ ಕೆಲವು ಉತ್ತಮ ಪದ್ಯಗಳನ್ನು ಹಾಡಿ ಭರವಸೆ ಮೂಡಿಸಿದರು. ಆರಂಭದಲ್ಲಿ ಈ ಭಾಗವತರ ಪದ್ಯ ಪ್ರೇಕ್ಶಕ ವರ್ಗದ ತಾಳ್ಮೆ ಪರೀಕ್ಶಿಸಿದರೂ ನಂತರದಲ್ಲಿ "ಆಗುವುದೆಲ್ಲಾ ಒಳ್ಳೆಯದಕ್ಕೆ" ಎಂಬ ಮಾತನ್ನು ಪುಸ್ಟೀಕರಿಸಿತು.

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಹೆರಂಜಾಲು ಅವರನ್ನು 'ಪರಂಪರೆಯ ಭಾಗವತ' ಎಂದು ಬ್ರಾಂಡ್ ಮಡುವ ಒಂದು ವಿಮರ್ಶಕ ವರ್ಗವಿದೆ. ಪರಂಪರೆಯ ಭಾಗವತ ಎಂದರೆ 'ಕೆಟ್ಟದಾಗಿ, ರಾಗ, ಲಯ, ಸ್ವರ ಶುದ್ಧಿಯಿಲ್ಲದೆ ಹಾಡುವ ಭಾಗವತ ಎಂಬುದು ಈಗ ಸರ್ವವಿದಿತ. ಇದಕ್ಕಾಗಿ ವಿಮರ್ಶಕ (?) ವರ್ಗವನ್ನು ತೆಗಳಬೇಕೆ, ಯಾರೋ ಹೇಳಿದ್ದನ್ನು ಸತ್ಯವೆಂದೇ ನಂಬುವ ಕಲಾಭಿಮಾನಿಗಳ ಮೌಡ್ಯದ ಕುರಿತು ಮರುಗಬೇಕೆ ಎಂಬುದು ಪ್ರಶ್ನೆಗಳೆ!

ರಾಘವೇಂದ್ರ ಮಯ್ಯರ ಭಾಗವತಿಕೆಯಲ್ಲಿ ರಾಗ ಮತ್ತು ಲಯಗಾರಿಕೆಯನ್ನು ನಿರೇಕ್ಷೆ ಮಾಡುವುದು ಸರಿಯಲ್ಲ.ಸ್ವರವನ್ನು ಪರಿಣಾಮಕಾರಿಯಾಗಿ ರಂಗದಲ್ಲಿ ಹೇಗೆ ಉಪಯೋಗಿಸಬೇಕು ಎಂಬ ಕುರಿತು ಮಯ್ಯರು ಆತ್ಮಾವಲೋಕನ ಮಾಡುವ ಅವಶ್ಯಕತೆ ಖಂಡಿತಕ್ಕೂ ಇದೆ. ಒಟ್ಟಿನಲ್ಲಿ ಯಕ್ಷ ಭಾಗವತಿಕೆಯ ಯುಗ ಪ್ರವರ್ತಕ ಮಿಂಚಿ ಮರೆಯಾದ ಸಾಲಿಗ್ರಾಮ ಮೇಳಕ್ಕೆ ಈಗ ಬೇಕಾಗಿರುವುದು ಒಬ್ಬ ಸಮರ್ಥ ಭಾಗವತ!

ರಮೇಶ ಬೇಗಾರರು ಒಂದು ಉತ್ತಮ ಕಾರ್ಯಕ್ರಮವನ್ನು ಸಂಯೋಜನೆ ಮಾಡಿರುವುದಕ್ಕೆ ಯಕ್ಶ ರಸಿಕರ ಪರವಾಗಿ ಅವರಿಗೆ ಕೃತಜ್ನತೆಗಳು. ಸಭಾ ಕಾರ್ಯಕ್ರಮವನ್ನು ಅಲ್ಪಾವದಿಯಲ್ಲಿ ಮುಗಿಸಿ ಅವರು ಕಾರ್ಯಕ್ರಮ ನಿರ್ವಹಣೆಗೊಂದು ದಿಶಾ ನಿರ್ದೇಶನವನ್ನು ಮಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಇದು ಹೀಗೇ ಮುಂದುವರಿದರೆ ಯಕ್ಷಗಾನ ಕಾರ್ಯಕ್ರಮಗಳಿಗೆ ಇನ್ನಷ್ಟು ಕಲಾಭಿಮಾನಿಗಳು ಕಾರ್ಯಕ್ರಮ ಸವಿಯಲೋಸುಗ ಮತ್ತೆ ಬಂದಾರು. ಹಾಗಾಗಲಿ ಎಂದು ಹಾರೈಸೋಣ.

1 comment:

RK Rajarama said...

Bahala vastu nista vimarshe. saligrama melada eegina bhagavatara baggina abhipraya aksharashaha satya!