Sunday, August 2, 2009

ಯಕ್ಷಪ್ರಿಯರ ಮನತಣಿಸಿದ 'ಜಾಂಬವತಿ ಕಲ್ಯಾಣ'




ಜಾಂಬವತಿ ಕಲ್ಯಾಣ ಬಡಗು ತಿಟ್ಟಿನಲ್ಲಿ ಅಪರೂಪವಾಗಿ ಪ್ರದರ್ಶಿತವಾಗುವ ಪ್ರಸಂಗ. ಈ ಪ್ರಸಂಗದಲ್ಲಿ ಹೆಸರು ಮಾಡಿದ ಪ್ರಸಿದ್ಧ ಕಲಾವಿದರ ಹೆಸರು ಕಾಣಸಿಗದು. ಶಂಭು ಹೆಗಡೆ, ಚಿಟ್ಟಾಣಿಯವರು ಈ ಪ್ರಸಂಗದಲ್ಲಿ ಪಾತ್ರ ವಹಿಸಿದ ಕುರಿತು ಹೆಚ್ಚೇನೂ ಮಾಹಿತಿಯಿಲ್ಲ. ಬಹುಶ ಚಿಟ್ಟಾಣಿಯವರು ಜಾಂಬವ ಮತ್ತು ಕೃಷ್ಣನ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಕ್ಕೂ ಸಾಕು. ರಸಮಯ ಸನ್ನಿವೇಶಗಳಿಂದೊಡಗೂಡಿದ ಈ ಪ್ರಸಂಗ ಎಲೆಮರೆಯ ಕಾಯಿಯಂತೆಯೇ ಇರುವುದಕ್ಕೆ ಕಾರಣ ತಿಳಿಯದು.

ಕೆಲವು ವರ್ಷಗಳ ಹಿಂದೆ ಕರ್ಕಿ ಮೇಳದವರು ಈ ಪ್ರಸಂಗವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದರು. ಪೆರ್ಡೊರು ಮತ್ತು ಸಾಲಿಗ್ರಾಮ ಮೇಳಗಳ ತಿರುಗಾಟದಲ್ಲಿ ಈ ಪ್ರಸಂಗ ಅಪರೂಪಕ್ಕೆ ಕಾಣಿಸಿಕೊಳ್ಳುವುದುಂಟು. ಕೊಂಡದಕುಳಿ ಬಳಗದವರಿಂದ ಬೆಂಗಳೂರಿನಲ್ಲಿ ಪ್ರದರ್ಶಿತವಾದ, ಜಾಂಬವತಿ ಕಲ್ಯಾಣ ಯಕ್ಷರಸಿಕರಿಗೆ ರಸದೌತಣವಾಯ್ತು.

ಬಲರಾಮನ ಪಾತ್ರದಲ್ಲಿ ವಿಶ್ಣು ಭಟ್ಟರು ತಮ್ಮ ಮಾತುಗಾರಿಕೆ, ಭಾವನೆಗಳ ಅಭಿವ್ಯಕ್ತಿಯಲ್ಲಿ ಮಿಂಚಿದರು. ಬಲರಾಮ ಮತ್ತು ಕೃಷ್ಣರ ಸನ್ನಿವೇಶಗಳು ಅತ್ಯಂತ ಸೊಗಸಾಗಿ ಮೂಡಿಬಂತು. ತೋಟಿಯವರ ಕೃಷ್ಣನ ಪಾತ್ರ ಈ ಸನ್ನಿವೇಶದಲ್ಲೂ ಮನೋಜ್ನವಾಗಿತ್ತು. ಕೃಷ್ಣ ಯಾದವರೊಡನೆ ಪ್ರಸೇನನನ್ನು ಹುಡುಕುತ್ತ ಹೊರಟ ದೃಶ್ಯಗಳು ಸೊಗಸಾಗಿದ್ದವು.

ನಾರದನ ಪಾತ್ರಧಾರಿಯು ಬಲರಾಮನಲ್ಲಿ ' ಈ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುವ ಕೆಲಸ ನನಗೆ ಬೇಡ' ಎಮ್ಬ ಮಾತುಗಳನ್ನಾಡಿ ಅಭಾಸಕ್ಕೆ ಗುರಿಯಾದರು.

ಜಾಂಬವತಿ ಕಲ್ಯಾಣದಲ್ಲಿ ಬಹು ನಿರೀಕ್ಷೆಯ ಪದ್ಯವೆಂದರೆ ಕೃಷ್ಣ ಜಾಂಬವತಿಯನ್ನು ಕಾಣುವ ಸನ್ನಿವೇಶದ 'ಶರದರುತು ಪೌರ್ಣಮಿಯ ಉದಯಚಂದಿರ ಕಾಂತಿ' ಹಾಡು. ಈ ಪದ್ಯವನ್ನು ಭಾಗವತ ಪ್ರಸನ್ನ ಭಟ್ ಬಾಳ್ಕಲ್ ಬಹಳ ಸೊಗಸಾಗಿ ಹಾಡಿದರು. ಈ ಹಾಡಿಗೆ ಕೃಷ್ಣನಾಗಿ ತೋಟಿಯವರ ಅಭಿನಯವೂ ಮನಮೋಹಕವಾಗಿತ್ತು. ಜಾಂಬವತಿಯ ಪಾತ್ರ ಮಾತ್ರ ಸೊರಗಿತು.

ಜಾಂಬವನಾಗಿ ಕೊಂಡದಕುಳಿಯವರು ಮಿಂಚಿದರು. ಜಾಂಬವನ ವೀರ ಮತ್ತು ಭಕ್ತಿ ರಸಗಳ ಅಭಿವ್ಯಕ್ತಿ ಮನಸೆಳೆಯಿತು. ತೊಟಿಮನೆಯವರ ಕೃಷ್ಣ ಕೂಡ ಜಾಂಬವನೊಂದಿಗೆ ಅಷ್ಟೇ ಸಮರ್ಥವಾಗಿ ಮೆರೆಯಿತು. ಕೊಂಡದಕುಳಿ, ತೋಟಿಯವರ ಜೋಡಿ ವೇಷಗಳು ಪ್ರೇಕ್ಷಕರಿಗೆ ರಸಗವಳ. ಜಾಂಬವನ ವೇಶ ಮತ್ತು ಮುಖವರ್ಣಿಕೆ ಬಹಳ ಸೊಗಸಾಗಿತ್ತು.

ಪ್ರಸನ್ನ ಭಟ್ಟ್ ಬಾಳ್ಕಲ್ ಅವರ ಭಾಗವತಿಕೆಯೂ ಪ್ರಸಂಗ ಕಳೆಗಟ್ಟಲು ಕಾರಣವಾಯ್ತು. ಕೆಲವು ಪದ್ಯಗಳು ಅತ್ಯಂತ ಭಾವಪೂರ್‍ಣವಾಗಿ ಮೂಡಿಬಂದವು. ಪೌರಾಣಿಕ ಪ್ರಸಂಗಗಳನ್ನು ಮತ್ತೆ ಜನಮಾನಸಕ್ಕೆ ತಲಪಿಸುತ್ತಿರವ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ಕೊಂಡದಕುಳಿ ಬಳಗಕ್ಕೆ ನಮನಗಳು.

Saturday, August 1, 2009

ಆರಕ್ಕೇರದ, ಮೂರಕ್ಕಿಳಿಯದ 'ಅಮರ ಕೃತಿಯ ಉತ್ಕೃಷ್ಟ ಪ್ರದರ್ಶನ, ಕೃಷ್ಣ ಸಂಧಾನ '


ಕೃಷ್ಣ ಸಂಧಾನ ಎಂಬ ಪ್ರಸಂಗದ ಹೆಸರು ಕೇಳಿದಾಗ ಮನಸ್ಸಿನಲ್ಲಿ ಮೂಡುವುದು ಶಂಭು ಹಗಡೆಯವರ ಕೃಷ್ಣನ ಪಾತ್ರವೇ. ಇಡಗುಂಜಿ ಮೇಳದಲ್ಲಿ ಮೆರೆದ, ಒಂದು ಕಾಲದಲ್ಲಿ ಕೃಷ್ಣ ಸಂಧಾನ ಎಂದರ ಇಡಗುಂಜಿ ಮೇಳದತ್ತಲೇ ಬೊಟ್ಟು ಮಾಡಿ ತೋರಿಸುವಷ್ಟರ ಮಟ್ಟಿಗೆ ಆ ಪ್ರಸಂಗ ಶಂಭು ಹಗಡೆಯವರ ಮೂಲಕ ಜನಪ್ರಿಯವಾಯಿತು. ತೆಂಕು ತಿಟ್ಟಿನಲ್ಲಿ ಬಹುತೇಕ ತಾಳಮದ್ದಲೆಗೇ ಈ ಪ್ರಸಂಗ ಮೀಸಲು. ಇಂದೂ ಕೂಡ ಇದು ತಾಳಮದ್ದಲೆಯ ಬಹು ಬೇಡಿಕೆಯ ಪ್ರಸಂಗಗಳಲ್ಲೊಂದು. ಖ್ಯಾತ ಯಕ್ಶಗಾನ ಕಲಾವಿದ, ವಿಮರ್ಷಕ ಪ್ರಭಾಕರ ಜೋಶಿಯವರು ಈ ಪ್ರಸಂಗದ ಬಗ್ಗೆ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಯಕ್ಶಗಾನದಲ್ಲಿ ನಾನು ನೋಡಿದ ಸಂಧಾನದ ಕೃಷ್ಣನ ಪಾತ್ರಗಳೆಂದರ ಶಂಭು ಹೆಗಡೆ, ಚಿಟ್ಟಾಣಿ, ಕೊಂಡದಕುಳಿ, ಗೋಪಾಲಾಚಾರಿ ಮತ್ತು ವಾಸುದೇವ ಸಾಮಗರದು.

ಬೆಂಗಳೂರಿನಲ್ಲಿ ಕೊಂಡದಕುಳಿ ಪ್ರತಿಷ್ಟಾನ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಕೃಷ್ಣ ಸಂಧಾನ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ನೆಬ್ಬೂರರ ಭಾಗವತಿಕೆ, ಕೊಂಡದಕುಳಿಯವರ ಕೃಷ್ಣ, ಥಂಡಿಮನೆಯವರ ಕೌರವ, ತೋಟಿಮನೆಯವರ ಭೀಮ, ಯಲಗುಪ್ಪ ಅವರ ದ್ರೌಪದಿ, ಶಿರಳಗಿ ತಿಮ್ಮಪ್ಪ ಹೆಗಡೆಯವರ ಧರ್ಮರಾಯ, ವಿಷ್ಣು ಭಟ್ಟರ ಸಂಜಯ - ಹೀಗೆ ಘಟಾನುಘಟಿ ಕಲಾವಿದರ ಸಂಯೋಗವೂ ಈ ಪ್ರಸಂಗಕ್ಕೆ ಒದಗಿ ಬಂದಿತ್ತು. ಪ್ರದರ್ಶನ ನಿರೀಕ್ಶೆಯ ಮಟ್ಟಕ್ಕೆ ಮುಟ್ಟದೆ, 'ಅಡ್ಡಿಯಿಲ್ಲ' ಎನಿಸಿಕೊಂಡಿತು. ಕೊಂಡದಕುಳಿಯವರು ಕೃಷ್ಣನ ಪಾತ್ರವನ್ನು ಇನ್ನೂ ಚೆನ್ನಾಗಿ ಮಾಡಿರುವುದನ್ನು ನಾನು ನೋಡಿದ್ದರಿಂದಲೋ ಏನೋ ಈ ಪ್ರದರ್ಶನದ ಅವರ ಕೃಷ್ಣನ ಪಾತ್ರದ ಬಗ್ಗೆ ಹೆಚ್ಚು ಬರೆಯಲು ಮನಸ್ಸಾಗುತ್ತಿಲ್ಲ. ಬಂದನು ದೇವರ ದೇವರ ಪದ್ಯದ ಚರಣವೊಂದಕ್ಕೆ ಹೊಸಬಗೆಯ ನೃತ್ಯವನ್ನು ಅಳವಡಿಸಿದ್ದು ಶ್ಲಾಘನೀಯ. ನೋಡಿದೆಯ ವಿಧುರ ಪದ್ಯಕ್ಕೆ ಅತ್ಯುತ್ತಮ ಅಭಿನಯ ಮತ್ತು ಕುಣಿತಗಳಿಂದ ರಂಜಿಸಿದರು. ವರ ಗದ್ದುಗೆಯ, ಚರಣ ಎನಗೆ ಪದ್ಯಗಳಿಗೆ ಅಭಿನಯ, ಕುಣಿತ ಸಾಲದು. 'ತುಂಬಿತಾಪುರ' ಎಂಬ ಪದ್ಯಕ್ಕೆ ವಿದುರ ಆಶ್ಚರ್ಯಚಕಿತನಾಗಬೇಕೆ ಹೊರತು ಕೃಷ್ಣನಲ್ಲ! ಈ ದೃಶ್ಯದಲ್ಲಿ ಕೊಂಡದಕುಳಿಯವರು ಕೃಷ್ಣನಾಗಿ ವಿಸ್ಮಯತೆಯ ಭಾವಪ್ರಕಟನೆ ಮಾಡಿರುವುದರ ಔಚಿತ್ಯ ಅರ್ಥವಾಗಲಿಲ್ಲ.

ಅಪರೂಪವಾಗಿ, ಉತ್ತಮ ಕಲಾವಿದರ ಕೂಡುವಿಕೆಯಿಂದ ಸಂಯೋಜನೆಗೊಂಡ ಈ ಪ್ರಸಂಗ ಉತ್ಕೃಷ್ಟತೆಗೇರದ್ದಕ್ಕೆ ಕಾರಣಗಳೆನಿರಬಹುದು ಎಂದು ಚಿಂತಿಸಿದಾಗ, ಮೊದಲನೆಯದಾಗಿ ಎದ್ದು ಕಾಣುವುದು ಹಿಮ್ಮೇಳ. ಪ್ರಸನ್ನ ಭಟ್, ಕೊಳಗಿ ಮತ್ತು ನೆಬ್ಬೂರರ ಧ್ವನಿ ಪ್ರೇಕ್ಶಕರನ್ನು ತಾಕಲೇ ಇಲ್ಲ. ನೆಬ್ಬೂರರು ಬಂದ ನಂತರ ಸ್ವಲ್ಪ ಸುಧಾರಣೆ ಕಂಡು ಬಂದರೂ ಅಭಿಮಾನಿಗಳ ಹೊರತಾಗಿ ಸಾಮಾನ್ಯ ಪ್ರೇಕ್ಶಕರನ್ನು ಸೆಳೆಯುವಲ್ಲಿ ಭಾಗವತಿಕೆ ವಿಫಲವಾಯಿತೆಂದೇ ಹೇಳಬಹುದು. ಬಹುಶ ಎ ಡಿ ಎ ರಂಗಮಂದಿರದ ಕಳಪೆ ಧ್ವನಿವರ್ಧಕ ವ್ಯವಸ್ಥೆಯೂ ಇದಕ್ಕೆ ಕಾರಣವಿರಬಹುದು. ಸಾಂಪ್ರದಾಯಿಕ ಪಾಂದವರ ಒಡ್ಡೋಲಗವನ್ನು ನಿರೀಕ್ಶಿಸಿದ್ದ ಪ್ರೇಕ್ಶಕರಿಗೆ, ಧರ್ಮರಾಯನ ನೀರಸ ಪ್ರವೇಶ ಭಾರೀ ನಿರಾಸೆ ಮೂಡಿಸಿತು. ಕೃಷ್ಣನ ಪ್ರವೇಶ ಕ್ರಮವೂ ಬಡಗಿನ ಸಾಂಪ್ರದಾಯಿಕ ಪ್ರವೇಶವಲ್ಲ. ಕೆಲವು ವರ್ಷಗಳ ಹಿಂದೆ ಪುತ್ತಿಗೆ ರಘುರಾಮ ಹೊಳ್ಳರು ಬೆಂಗಳೂರಿನ ಪ್ರದರ್ಷನವೊಂದರಲ್ಲಿ ಕೃಷ್ಣನ ತೆಂಕುತಿಟ್ಟಿನ ಸಾಂಪ್ರದಾಯಿಕ ಒಡ್ಡೋಲಗವನ್ನು ಮಾಡಿಸಿದ್ದರು. ಬಡಗು ತಿಟ್ಟಿನಲ್ಲೂ ಇಂಥಹ ಸಾಂಪ್ರದಾಯಿಕ ಒಡ್ಡೋಲಗವಿದ್ದರೂ ಇಂದು ಅದನ್ನು ಮಾಡಿ ತೋರಿಸುವವರೇ ಇಲ್ಲ ಎಂಬಂತಾಗಿದೆ. ಶಂಭು ಹೆಗಡೆಯವರೂ ಕೂಡಾ ಈ ಸಂಪ್ರದಾಯವನ್ನು ಬಿಟ್ಟಿರುವುದು ದು:ಖದ ವಿಶಯ. ಶಂಭು ಹೆಗಡೆಯವರ ಕೃಷ್ಣನ ಅನುಕರಣೆ ಮಾಡುವಾಗ ಸಹಜವಾಗಿಯೆ ಇಂದಿನ ಕಲಾವಿದರು ಇದರ ಕುರಿತು ಚಿಂತಿಸಲು ಅವಕಾಶವಾದರೂ ಎಲ್ಲಿದೆ?

ದ್ರೌಪದಿಯ ಪಾತ್ರಕ್ಕೆ ಯಲಗುಪ್ಪರು ಇನ್ನೂ ತಯಾರಾಗಿಲ್ಲ. ತೋಟಿಯವರ ಭೀಮ ಉತ್ತಮವಾಗಿತ್ತಾದರೂ, ಕೋಮಲಾಂಗಿ ಕೇಳೆ ಪದ್ಯಕ್ಕೆ ಅಭಿನಯ, ಕುಣಿತ ಸಾಲದು. ವಿದುರನ ವೇಶವನ್ನು ವಿಶ್ಣು ಭಟ್ಟರು ಶುದ್ಧ ಯಕ್ಶಗಾನ ರೀತಿಯಲ್ಲಿ ಮಾಡಿರುವುದು ಸ್ವಾಗತಾರ್ಹ. ಬಹುತೇಕ ವಿದುರರು ಇಂದು ಪೇಟಾ ಧರಿಸಿ ನಾಟಕದ ವಿದುರರಾಗುತ್ತಿರುವುದು ದುರ್ದೈವ. ಆದರೆ ವಿದುರನ ಪಾತ್ರ ಉತ್ತಮ ವೇಶಕ್ಕಷ್ಟೇ ಸೀಮಿತವಾಯಿತು. ಥಂಡಿಯವರ ಕೌರವನಿಗೆ ಇನ್ನೂ ಹೆಚ್ಚಿನ 'ಗತ್ತು' ಅವಶ್ಯ. ಕೌರವನ ಆಸ್ಥಾನದಲ್ಲಿ ನಡೆದ ಯಲಗುಪ್ಪರ ನಾಟ್ಯ ಪ್ರೇಕ್ಷಕರನ್ನು ರಂಜಿಸಿತಾದರೂ, ಈ ನ್ರುತ್ಯದ ಸಾಂಪ್ರದಾಯಿಕತೆ ಪ್ರಶ್ಣಾರ್ಹ.

ಒಟ್ಟಂದದ ಕುರಿತು ಹೇಳುವುದಾದರೆ ಈ ಪ್ರದರ್ಷನ ಟೆಂಟ್ ಆಟದ ಮಟ್ಟದಲ್ಲೇ ಉಳಿಯಿತು. ಅಮರ ಕೃತಿಯ ಉತ್ಕೃಷ್ಟ ಪ್ರದರ್ಶನ ಎಂಬ ಹೇಳಿಕೆಯನ್ನು ಕರಪತ್ರದಿಂದ (ಪ್ರಚುರಪಡಿಸಿದಂತೆ) ಎತ್ತಿಕೊಳ್ಳಲಾಗಿದೆ.