Sunday, July 26, 2009

ಕೊಂಡದಕುಳಿಯವರ ಅಮೋಘ ಭರತನ ಪಾತ್ರದಲ್ಲಿ ಮೆರೆದ ಧರ್ಮಾಂಗದ ದಿಗ್ವಿಜಯ

ಪಾತ್ರಕೊಪ್ಪುವ ಕುಣಿತ, ನೃತ್ಯ, ಮಾತು, ಹಾವ ಭಾವಗಳಿಂದ ಕೊಂಡದಕುಳಿಯವರು ಭರತನಾಗಿ ಯಕ್ಷಲೋಕವನ್ನು ಧರೆಗಿಳಿಸಿದರು. ಧರ್ಮಾಂಗದನಾಗಿ ಗೋಪಾಲಾಚಾರಿಯವರು ಉತ್ತಮ ಕುಣಿತಗಳಿಂದ ರಂಜಿಸಿದರೂ, ಅಭಿನಯದ ಕೊರತೆ ಎದ್ದು ಕಾಣುತ್ತಿತ್ತು. ಧರ್ಮಾಂಗದನ ಅಪರೂಪದ ಪ್ರಯಾಣ ನೃತ್ಯ ಗಮನ ಸೆಳೆಯಿತು. ಯಕ್ಶಗಾನದಲ್ಲಿ ಇತ್ತೀಚೆಗೆ ಮರೆಯಾಗುತ್ತಿರುವ ಯುದ್ಧ ನೃತ್ಯ, ಪ್ರಯಾಣ ನೃತ್ಯಗಳನ್ನು ಬಳಸುವುದು ನಿಜಕ್ಕೂ ಸ್ವಾಗತಾರ್ಹ. ಬಲಿಯಾಗಿ ಗುಡಿಗಾರರು ಉತ್ತಮ ಕುಣಿತದಿಂದ ಗಮನ ಸೆಳೆದರು. ಗುಡಿಗಾರರ ಮಾತುಗಾರಿಕೆ ಮಾತ್ರ ಬಲಿಯ ಪಾತ್ರಕ್ಕೆ ಲಘುವಾಗಿ ತೋರಿಬಂತು.

ಧಾರೇಶ್ವರರು ಮತ್ತೆ ಭಾರೀ ಯಕ್ಷ ರಸಾನುಭವವನ್ನು ನೀಡಿದರು. ಪ್ರಸಂಗ ಮುಂದುವರಿಯುತ್ತಿದ್ದಂತೆ ಧಾರೇಶ್ವರರರ ಭಾಗವತಿಕೆಗೆ ಕಾವೇರಿತು. ಭರತ, ಧರ್ಮಾಂಗದ, ಬಲಿ - ಈ ಮೂರೂ ಪಾತ್ರಗಳನ್ನು ಸಮರ್ಥವಾಗಿ ದುಡಿಸಿಕೊಂಡ ಧಾರೇಶ್ವರರು ಪ್ರಸಂಗದ ಯಶಸ್ಸಿಗೆ ಕಾರಣರಾದರು. ಸಾಹಿತ್ಯ ಸ್ಪಷ್ಟತೆ, ಭಾವಕ್ಕನುಗುಣವಾಗಿ ಪದ್ಯದ ಶಬ್ಧಗಳಿಗೆ ನೀಡುವ ಒತ್ತು, ಅಚ್ಚುಕಟ್ಟಾದ ಆಕರ್ಷಕ ಸ್ವರವಿನ್ಯಾಸ, ಭಾವಕ್ಕೊಪ್ಪುವ ರಾಗಗಳ ಬಳಕೆ ಧಾರೇಶ್ವರರ ವಿಶೇಷತೆ. ಕೇವಲ ವೀರ ರಸದ ಪ್ರಸಂಗದಲ್ಲೂ ಧಾರೇಶ್ವರರು ಅತ್ಯಂತ ಪರಿಣಾಮಕಾರಿಯಾಗಿ ಹಾಡಬಲ್ಲರು ಎಂಬುದಕ್ಕೆ ಈ ಪ್ರದರ್ಶನ ನಿದರ್ಶನ.

ಬಹುಶ: ಕೊಂಡದಕುಳಿಯವರು ಭರತನ ಪಾತ್ರ ವಹಿಸದಿದ್ದರೆ ಈ ಪ್ರಸಂಗ ಈ ಮಟ್ಟಿನ ಯಶಸ್ಸನ್ನು ಕಾಣುತ್ತಿರಲಿಲ್ಲ ಎಂಬುದು ನನ್ನ ಭಾವನೆ. ಹಾಗಾಗಿಯೇ ಅವರ ಹೆಸರಿನ ತಲೆಬರಹದಡಿಯಲ್ಲಿ ಉಳಿದ ವಿವರಗಳು ಕಾಣಿಸಿಕೊಂಡಿವೆ. ಬೆಂಗಳೂರು ಯಕ್ಶ ಪ್ರೇಮಿಗಳಿಗೆ, ಅಪರೂಪದ, ಆಕರ್ಷಕ ಪ್ರದರ್ಷನ ನೀಡಿದ ಕಲಾವೃಂದಕ್ಕೆ,ಸಂಘಟಕರಿಗೆ ವಂದನೆಗಳು. ಅಂದ ಹಾಗೆ ಈ ಪ್ರದರ್ಶನ ನಡೆದದ್ದು ಬೆಂಗಳೂರಿನ ಯಕ್ಷಗಾನ ಸಂಚಾಲಕ ನೈಲಾಡಿ ಪ್ರಕಾಶ ಶೆಟ್ಟಿಯವರ ಹೃದಯ ಚಿಕಿತ್ಸೆಯ ಸಹಾಯಾರ್ಥವಾಗಿ. ಅವರು ಬೇಗನೆ ಚೇತರಿಸಿಕೊಳ್ಳುವಂತಾಗಲಿ ಎಂಬ ಹಾರೈಕೆಯೊಂದಿಗೆ..

Saturday, July 25, 2009

ಗಾಯನ ಗಾರುಡಿಗನ ಗಂಧರ್ವ ಗಾನದಲ್ಲಿ ಇತಿಹಾಸವಾದ ರುದ್ರಕೋಪ ಪ್ರದರ್ಶನ



ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶನಗೊಂಡ ರುದ್ರಕೋಪ ಪ್ರಸಂಗದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಕೇಳಲು ಎರಡು ಕಿವಿಗಳು ಸಾಲದಾಯ್ತು, ನೋಡಲು ಎರಡು ಕಂಗಳು ಸಾಲದಾಯ್ತು'.

ರುದ್ರಕೋಪರಾಗಿ ಚಿಟ್ಟಾಣಿ ಮತ್ತು ಗೋಪಾಲಾಚಾರಿ, ಚಿತ್ರಾಕ್ಶಿಯಾಗಿ ನೀಲ್ಕೋಡ್, ರಕ್ತಜಂಘನಾಗಿ ಉಪ್ಪುಂದ, ರಕ್ತಕೇಶಿಯಾಗಿ ಗುಡಿಗಾರ, ಅಜ್ಜಿಯಾಗಿ ರಮೇಶ ಭಂಡಾರಿ, ದೂತನಾಗಿ ರವೀಂದ್ರ, ಭಾಗವತರಾಗಿ ಧಾರೇಶ್ವರ ಮತ್ತು ಕೊಳಗಿ, ಚೆಂಡೆಯಲ್ಲಿ ರಾಕೇಶ್ ಮಲ್ಯ ಮತ್ತು ಗುಂಡ, ಮದ್ದಳೆಯಲ್ಲಿ ಶ್ರೀಧರ ಭಂಡಾರಿ ಮತ್ತು ಸುನಿಲ್ ಭಂಡಾರಿ, ಚಂದ್ರಸೇನನಾಗಿ ವಿಶ್ವನಾಥ ಆಚಾರ್ಯ ಪ್ರೇಕ್ಶಕರಿಗೆ ಮರೆಯಲಾಗದ ರಸದೌತಣವನ್ನು ನೀಡಿದರು.

ಸರ್ವಕಲಾವಿದರೂ ಸರ್ವಾಂಗ ಸುಂದರ ಪ್ರದರ್ಶನ ನೀಡಿದರೂ ಈ ಪ್ರದರ್ಶನದಲ್ಲಿ ಹೊಡೆದು ಕಾಣಿಸಿದ ಅಂಶ ಧಾರೇಶ್ವರರ ಭಾಗವತಿಕೆ. ಆ ದಿನ ಅದೆಲ್ಲಿಯ ಉತ್ಸಾಹವೋ, ಧಾರೇಶ್ವರರು ಗಂಧರ್ವ ಗಾನದ ಸವಿಯನ್ನು ಮೊಗೆಮೊಗೆದು ಉಣಬಡಿಸಿದರು. ರಕ್ತಕೇಶಿಯ ಅಬ್ಬರದ ಪ್ರವೇಶಕ್ಕೆ ತೆಂಕಿನ ಚೆಂಡೆ, ಚಕ್ರತಾಳದ ಝೇಂಕಾರಕ್ಕೆ ಧಾರೇಶ್ವರರು ಬಂದು ರಂಗ ಸಾರಥ್ಯ ವಹಿಸಿದಾಗ ಒಂದು ಮಾಯಾಲೋಕವೇ ನಿರ್ಮಾಣವಾಯಿತು. ಹಳೆ, ಹೊಸ ಶೈಲಿಗಳ ಮೋಹಕ ಕೊಲಾಜ್, ಸ್ವರದ ಸರ್ವಾಂಗ ಸುಂದರ ಬಳಕೆ, ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡ ರಂಗತಂತ್ರಗಳು, ಪ್ರೇಕ್ಶಕರನ್ನು ಅಕ್ಶರಶ: ಸಂಮೋಹಿನಿಗೊಳಪಡಿಸಿತು. ಕೆಲವು ಪದ್ಯಗಳಂತೂ ಯಕ್ಷಲೋಕವನ್ನೇ ಧರೆಗಿಳಿಸಿತು. ಆರಂಭದಲ್ಲಿ ಹಾಡಿದ ಕೊಳಗಿಯವರೂ ಒಟ್ಟೂ ಪ್ರಸಂಗ ಕಳೆಗಟ್ಟಲು ಕಾರಣರಾದರು. ಪ್ರಸಂಗದುದ್ದಕ್ಕೂ ಪ್ರೇಕ್ಷಕರು ತಲೆದೂಗಿದರು, ಭಾವೋತ್ಕರ್ಶದ ಅಲೆಯಲ್ಲಿ ಕಣ್ಣೀರು ಮಿಡಿದರು, ಯಕ್ಶಲೋಕದ ಸವಿಯನ್ನು ಕ್ಷಣ ಕ್ಷಣವೂ ಅನುಭವಿಸಿದರು.

ರುದ್ರಕೋಪ ಪ್ರಸಂಗದ ಸ್ಥಾಪಿತ 'ಎಲ್ಲೆಲ್ಲೂ ಸೊಬಗಿದೆ' ಪದ್ಯಕ್ಕೆ ಬದಲಾಗಿ ಧಾರೇಶ್ವರರು ಹೊಸ ಪದ್ಯವನ್ನು ಬಳಸಿ ಹೊಸ ಪರಿಣಾಮವನ್ನುಂಟುಮಾಡಿದರು. ನಾನು ಕರೆದೊಯ್ದ ಹೊಸಪ್ರೇಕ್ಶಕರೀರ್ವರು ಮುಂದಿನ ಪ್ರದರ್ಶನಗಳಿಗೆ ನಾವಿದ್ದೇವೆ ಎಂದು ಹೇಳಿರುವುದು ಬಹುಶ: ಈ ಪ್ರದರ್ಶನದ ಯಶಸ್ಸಿಗೆ ಸಾಕ್ಷಿ!

ಒಟ್ಟಿನಲ್ಲಿ ಯಕ್ಶಗಾನದ ಇತಿಹಾಸದಲ್ಲಿ , ಅದರಲ್ಲೂ ಮುಖ್ಯವಾಗಿ ಧಾರೇಶ್ವರ ಆತ್ಮವ್ರುತ್ತಾಂತದಲ್ಲಿ ಅಗತ್ಯವಾಗಿ ದಾಖಲಾಗಬೇಕಾದ ಪ್ರದರ್ಶನವಿದು. ಸಂಘಟಕರಾದ ಕಲಾವಿದ ಮಂಜುನಾಥ ಕಟ್ಕೆರೆ, ಸರ್ವ ಕಲಾವಿದರಿಗೆ, ಅಭಿನಂದನೆಗಳು, ಅಭಿವಂದನೆಗಳು. ಯಕ್ಶಗಾನಂ ಗೆಲ್ಗೆ!

Wednesday, July 22, 2009

ಭಸ್ಮಾಸುರ - ಒಂದು ಹರಕೆ ಮುಗಿಸಿದ ಅನುಭವ

ಪ್ರಸ್ತುತ ಕಲಾವಿದರಲ್ಲಿ ಭಸ್ಮಾಸುರನ ಪಾತ್ರವನ್ನು ದಕ್ಕಿಸಿಕೊಂಡ ಏಕಮಾತ್ರ ಕಲಾವಿದರೆಂದರೆ ಚಿಟ್ಟಾಣಿಯವರು. ಅತಿರಥ ಕಲಾವಿದರಾದ ಶಂಭು ಹೆಗಡೆ,ಗೋಡೆ , ಮಹಾಬಲ ಹೆಗಡೆ ಮತ್ತು ಇತ್ತೀಚಿನ ದಿನಗಳಲ್ಲಿ ಕೊಂಡದಕುಳಿ, ಕಣ್ಣಿ ಮುಂತಾದ ಕಲಾವಿದರಿಗೂ ಈ ಪಾತ್ರ ಒಲಿಯಲಿಲ್ಲ. ಇಂಥ ಕಾಲಘಟ್ಟದಲ್ಲಿ ಭಸ್ಮಾಸುರ ಪಾತ್ರದಲ್ಲಿ ಕೇಳಿ ಬರುತ್ತಿರುವ ಹೆಸರು ತೋಟಿಮನೆ ಗಣಪತಿ ಹೆಗಡೆಯವರದು.

ಭಸ್ಮಾಸುರನ ಪ್ರವೇಶದಲ್ಲಿ ಪ್ರೇಕ್ಶಕರಿಗೆ ರೋಮಾಂಚನ ಉಂಟು ಮಾಡಿದ ತೋಟಿ ಹೊಸ ಭರವಸೆ ಹುಟ್ಟಿಸಿದ್ದಾರೆ. ಸದ್ದಿಲ್ಲದೆ ಮದ್ದರೆವೆ, ಆಲಿಸು ದೇವರ ದೇವ ಮುಂತಾದ ಪದ್ಯಗಳಿಗೆ ಉತ್ತಮ ಅಭಿನಯ ಮತ್ತು ಕುಣಿತಗಳಿಂದ ಮನಸೂರೆಗೈದರು. ಭಸ್ಮಾಸುರನ ಆರಂಭದ ದ್ರುಶ್ಯಗಳಿಗೆ ಚಿಟ್ಟಾಣಿಯವರು ಕಿರೀಟ ಬಳಸುತ್ತಾರೆ. ಬಹುಶ ತೋಟಿಯವರು ಇಲ್ಲಿ ಶಂಭು ಹೆಗಡೆಯವರ ಭಸ್ಮಾಸುರ ವೇಷದಿಂದ ಪ್ರಭಾವಿತರಾದಂತೆ ತೋರುತ್ತದೆ. ತೋಟಿಯವರು ಯಾವ ಸನ್ನಿವೇಶಗಳಿಗೂ ಕಿರೀಟ ಧರಿಸಲಿಲ್ಲ. ಯಕ್ಶಗಾನದಲ್ಲಿ ಭಸ್ಮಾಸುರನಿಗೆ ಯಾವ ರೀತಿಯ ಕಿರೀಟ ಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲವಿದ್ದ ಹಾಗಿದೆ. ಭಸ್ಮಾಸುರನ ಪಾತ್ರಕ್ಕೆ ಬಹುಶ ಚಿಟ್ಟಾಣಿಯವರೆ ರೆಫ಼ರೆನ್ಸ್.

ಸಮಯದ ಅಭಾವದಿಂದ ಮೋಹಿನಿ ಭಸ್ಮಾಸುರರ ಶ್ರುಂಗಾರ ಸನ್ನಿವೇಶಗಳು ನಿರೀಕ್ಶೆಯ ಮಟ್ಟವನ್ನು ತಲುಪಲಿಲ್ಲ. ತೋಟಿಯವರಿಗೆ ಈ ಸನ್ನಿವೇಶಗಳಿಗೆ ಭಾಗವತರಾಗಿ ಒದಗಿ ಬಂದವರು, ಭಸ್ಮಾಸುರ ಮೋಹಿನಿ ಪ್ರಸಂಗದ ಭಾಗವತಿಕೆಗೆ ನ ಭೂತೊ ನ ಭವಿಶ್ಯತಿ ಎಂದು ಹೆಸರಾದ ಧಾರೇಶ್ವರರು. ಶ್ರುಂಗಾರ ಸನ್ನಿವೇಶಗಳೆಲ್ಲಾ ಅತ್ಯಂತ ವೇಗವಾಗಿ ಮುಗಿದು ಪ್ರಸಂಗದ ಕೊನೆಯ ಹಂತ ಭಾರ್‍ಈ ನಿರಾಸೆ ಮೂಡಿಸಿತು.

ಭಸ್ಮಾಸುರನ ಭೋಗಲಾಲಸೆಯ ಉತ್ಕಂಠತೆಯನ್ನು ಸಾರುವ (ಇದು ಭಸ್ಮಾಸುರ ಪ್ರಸಂಗದ ಅತ್ಯಂತ ಪ್ರಸಿದ್ಧ ಪದ್ಯಗಳಲ್ಲೊಂದು) ಜಾಣೆ ಶಿರೋಮನಿ ಬಾರೆ ಪದ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ ಧಾರೇಶ್ವರರು ಪ್ರೇಕ್ಶಕರಿಗಿ ಭಾರ್‍ಈ ನಿರಾಸೆ ಉಂಟು ಮಾಡಿದರು.ಅದೇ ರೀತಿ ಮೋಹಿನಿ ತನ್ನ ಹರಕೆಯೊಂದಿದೆ ಎಂದು ಭಸ್ಮಾಸುರನಿಗೆ ನಿವೇದನೆ ಮಾಡಿಕೊಳ್ಲುವ ಪದ್ಯವೂ ಮಾಯ. ಒಟ್ಟೂ ಪ್ರಸಂಗದ ದ್ರುಷ್ಟಿಯಿಂದ ಪ್ರೇಕ್ಶಕರಿಗೆ ಕಲಾವಿದರು ಒಂದು ಪ್ರದರ್ಶನದ ಹರಕೆ ತೀರಿಸಿದ ಅನುಭವ. ಯಕ್ಶಗಾನದಿಂದ ಪ್ರೇಕ್ಶಕ ದೂರವಾಗುವುದಕ್ಕೆ ಇದೂ ಒಂದು ಕಾರಣ ಎಂದು ವಿಶಾದದಿಂದ ಹೇಳಬೇಕಾಗಿದೆ..

೫ ಘಂಟೆಗೆ ಒದಗುವ ಪ್ರಸಂಗವನ್ನು ಮೂರು ಘಂಟೆಗಳಿಗೆ ಕುಗ್ಗಿಸುವಾಗ , ಕಲಾವಿದರು ಒಟ್ಟಿಗೆ ಕುಳಿತು ಯೋಚಿಸುವ ಅವಶ್ಯಕತೆ ಇದೆ. ಹಾಸ್ಯ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಸಮಯದ ನಿಗದಿ, ವಿಶ್ಣುವಿನ ಪಾತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಅವಕಾಶ, ಅನಗತ್ಯ ದೇವೇಂದ್ರನ ಒಡ್ಡೋಲಗ (ಅದು ಸಾಂಪ್ರದಾಯಿಕ ಅಲ್ಲ)ಇತ್ಯಾದಿಗಳಿಂದಾಗಿ ಪ್ರಸಂಗ ಸೊರಗಿತು.

ಮೋಹಿನಿಯ ಪಾತ್ರದಲ್ಲಿ ನೀಲ್ಕೋಡ್ ಮಂಟಪ ಪ್ರಭಾಕರ ಉಪಾಧ್ಯರ ಮೋಹಿನಿ ಪಾತ್ರವನ್ನು ಅನುಕರಿಸಿದರೂ ತಮ್ಮ ನ್ರುತ್ಯದಿಂದ ಗಮನ ಸೆಳೆದರು. ಶಿವನಾಗಿ ಉಪ್ಪುಂದ ನಾಗೆಂದ್ರ ಉತ್ತಮ ಪ್ರದರ್ಶನ ನೇಡಿದರು. ಮಾತುಗಾರಿಕೆಯಲ್ಲಿ ಪಳಗಿದರೆ, ಇವರಿಂದ ಇನ್ನಷ್ಟು ನಿರೀಕ್ಶಿಸಬಹುದು.

ಧಾರೇಶ್ವರರು ಕೆಲವು ಹಳೆಯ ಮಟ್ಟಿನ ಹಾಡುಗಳನ್ನು (ಬಂದಳಾಗ ಮೋಹಿನಿ ಆನಂದದಿಂದ, ಯಾರಯ್ಯ ವಿಚಾರಿಸುವೆ, ಕಂಡನು ಭಸ್ಮಾಸುರ) ಆಕರ್ಶವಾಗಿ ಹಾಡಿದರು. ಆದರೆ ಅವರು ಹಾಡಿದ ಪದ್ಯಗಳಿಗಿಂತಲೂ ಕತ್ತರಿ ಪ್ರಯೋಗಕ್ಕೆ ಒಳಗಾದ ಪದ್ಯಗಳೇ ಜಾಸ್ತಿ ಇದ್ದುದರಿಂದಲೋ ಏನೋ, ಪ್ರಸಂಗ ಕಳೆ ಕಟ್ಟಲಿಲ್ಲ. ತೋಟಿಯವರಿಗೆ ಭಸ್ಮಾಸುರನ ಪಾತ್ರ ಒಲಿಯುವ ಎಲ್ಲ ಲಕ್ಶಣಗಳೂ ಇವೆ ಎಂಬುದು ಸಮಧಾನದ, ಸಂತೋಷದ ಸಂಗತಿ.