Sunday, April 11, 2010

ನೆಬ್ಬೂರರ ಅಮೋಘ ಗಾನ ನಿನಾದದಲ್ಲಿ ರಂಜಿಸಿದ ಶ್ರೀರಾಮ ನಿರ್ಯಾಣ

ಶ್ರೀರಾಮ ನಿರ್ಯಾಣ ಎಂಭತ್ತರ ದಶಕದಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ, ಇಡಗುಂಜಿ ಮೇಳದಲ್ಲಿ ಶಂಭು ಹೆಗಡೆ ಮತ್ತು ನೆಬ್ಬೂರು ಭಾಗವತರಿಂದ ಪ್ರಸಿದ್ಧಿಗೆ ಬಂದ ಪ್ರಸಂಗ. ಈ ಪ್ರಸಂಗದ ಹಾಡುಗಳಿಗೆ ನೆಬ್ಬೂರರು ಮಾದರಿಯಾದರೆ ಶ್ರೀರಾಮನ ಪಾತ್ರಕ್ಕೆ ಶಂಭು ಹೆಗಡೆಯವರೇ ಮಾದರಿ. ಹೊಸ ಪೀಳಿಗೆಯ ಕಲಾವಿದರಲ್ಲಿ ನಿರ್ಯಾಣದ ರಾಮನ ಪಾತ್ರವನ್ನು ಕೊಂಡದಕುಳಿ ಮಾತು ಯಾಜಿಯವರು ನಿರ್ವಹಿಸುತ್ತಿದ್ದರೆ, ಭಾಗವತಿಕೆಯಲ್ಲಿ ಈ ಪ್ರಸಂಗವನ್ನು ಕಳೆಗಟ್ಟಿಸುವ ಭಾಗವತರು ಹೊಸ ಪೀಳಿಗೆಯಲ್ಲಿಲ್ಲ.

ಬೆಂಗಳೂರಿನಲ್ಲಿ ನಡೆದ ಕೊಂಡದಕುಳಿ ಬಳಗ ರಾಮ ನಿರ್ಯಾಣ ಉತ್ತಮವಾಗಿ ಮೂಡಿ ಬಂತು. ಈ ಪ್ರಸಂಗವನ್ನು ಕಳೆಗಟ್ಟಿಸಿದ್ದು ನೆಬ್ಬೂರರ ಶ್ರೇಶ್ಟ ಭಾಗವತಿಕೆ ಮತ್ತು ಹಡಿನಬಾಳ ಶ್ರೀಪಾದ ಹೆಗಡೆಯವರ ದೂರ್ವಾಸನ ಪಾತ್ರ. ಯಕ್ಶಗಾನದ ಪರಂಪರೆಯ ಹಾಡುಗಳ ರುಚಿಯನ್ನು ಉಣಬಣಿಸಿದ ನೆಬ್ಬೂರರು ಹೊಸ ಪ್ರೇಕ್ಶಕ ವರ್ಗ ಕೂಡಾ ಈ ಸವಿಗೆ ತಲೆದೂಗುವಂತೆ ಮಾಡಿದರು. ನಿರ್ಯಾಣ ನೆಬ್ಬೂರರ ’ಮಾಸ್ಟರ್ ಪೀಸ್’ ಪ್ರಸಂಗಗಳಲ್ಲೊಂದು. ಶ್ರೀಪಾದ ಹೆಗಡೆಯವರ ದೂರ್ವಾಸ ಮಹಾಬಲ ಹೆಗಡೆಯವರನ್ನು ನೆನಪಿಸಿತು. ಪೋಶಕ ಪಾತ್ರವೊಂದನ್ನು ಹೇಗೆ ಪ್ರೇಕ್ಶಕನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಮಾಡಿ ತೋರಿಸಬಹುದು ಎಂಬುದಕ್ಕೆ ಈ ಪಾತ್ರ ಉದಾಹರಣೆ. ತೊಂಭತ್ತರ ದಶಕದಲ್ಲಿ ಮಹಾಬಲ ಹೆಗಡೆಯವರು ಬ್ರಹ್ಮ ಕಪಾಲ ಪ್ರಸಂಗದಲ್ಲಿ ಮಹೋಗ್ರನ ಪಾತ್ರದಲ್ಲಿ ಇದೇ ರೀತಿಯ ಪರಿಣಾಮವನ್ನು ಉಂಟು ಮಾಡಿದ್ದು ನೆನಪಿಗೆ ಬಂತು.

ನಿಟ್ಟೂರು ಅನಂತ ಹೆಗಡೆಯವರ ಕಾಲಪುರುಶ ಉತ್ತಮವಾಗಿತ್ತು. ಲಕ್ಶ್ಮಣನಾಗಿ ತೋಟಿಯವರು ಪರಿಣಾಮ ಬೀರಲಿಲ್ಲ. ಲಕ್ಶ್ಮಣನ ವೇಶ ತೋಟಿಯವರಿಗೆ ಒಪ್ಪಲಿಲ್ಲ. ರಾಮ ಮತ್ತು ಲಕ್ಸ್ಮಣನ ಮೀಸೆಯನ್ನು ನೋಡುತ್ತಿದ್ದರೆ ರಾಜವೇಶಗಳಿಗೆ ಸಂಪ್ರದಾಯದಂತೆ ’ಕಟ್ಟು ಮೀಸೆ’ಯನ್ನು ಬಳಸುವುದೇ ಸೂಕ್ತ ಎಂದೆನಿಸಿತು. ರಾಮನಾಗಿ ಕೊಂಡದಕುಳಿಯವರು ಉತ್ತಮ ನ್ರುತ್ಯ ಮತ್ತು ಭಾವಭಿನಯಗಳಿಂದ ರಂಜಿಸಿದರೂ ಮಾತುಗಾರಿಕೆ ಸೊರಗಿತು. ಕೊಂಡದಕುಳಿಯವರ ಸ್ವರ ಮತ್ತು ಮಾತುಗಾರಿಕೆಯ ಶೈಲಿ ಶೋಕ ರಸ ಮತ್ತು ವೀರ ರಸಗಳ ಅಭಿವ್ಯಕ್ತಿಗೆ ಹೇಳಿಸಿದ್ದಲ್ಲ ಎಂಬ ವಿಮರ್ಶಕರ ಮಾತು ನಿಜವೆನಿಸಿತು. ಆದರೆ ಪ್ರಸ್ತುತ ಪೀಳಿಗೆಯ ಕಲಾವಿದರಲ್ಲಿ ರಾಮನ ಪಾತ್ರವನ್ನು ಅಚ್ಚಿಕಟ್ಟಾಗಿ ನಿರ್ವಹಿಸಬಲ್ಲ ಕಲಾವಿದ ಕೊಂಡದಕುಳಿ ಎಂಬುದರಲ್ಲಿ ಅನುಮಾನವಿಲ್ಲ. ಅವರ ಕುಶ ಲವ ಪ್ರಸಂಗದ ರಾಮನ ಪಾತ್ರ ಒಂದು ’ಮಾಸ್ಟರ್ ಪೀಸ್’.

ಕೊಂಡದಕುಳಿಯವರು ಹೊಸದಾಗಿ ಅಳವಳಿಸಿದ ’ವೈಕುಂಠ ದರ್ಶನ’ ದಲ್ಲಿ ದಶಾವತಾರವನ್ನು ಹಸ್ತಮುದ್ರಿಕೆಗಳ ಮೂಲಕ ಸುಂದರವಾಗಿ ನಿರೂಪಿಸಿದರು. ಇದು ರಾಮನಿರ್ಯಾಣದಲ್ಲಿ ಕೊಂಡದಕುಳಿಯವರ ಸೇರ್ಪಡೆಯಾದರೂ ಯಕ್ಶಗಾನಕೆ ಹೊಸದಲ್ಲ. ಶಂಭು ಹೆಗಡೆಯವರು ರಾವಣ ವಧೆ ಪ್ರಸಂಗದಲ್ಲಿ ಇದೇ ರೀತಿಯ ಅಭಿನಯ ಮಾಡುತ್ತಿದ್ದರೆ, ಚಿಟ್ಟಾಣಿಯವರು ಕೌರವನಾಗಿ ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಈ ಪ್ರಯೋಗವನ್ನು ಮಾಡಿದ್ದಾರೆ. ಕೊಂಡದಕುಳಿಯವರ ಕಲ್ಪನೆ ಯಕ್ಶಗಾನಕ್ಕಿಂತಲೂ ನ್ರುತ್ಯ ರೂಪಕದೆಡೆಗೆ ವಾಲಿತ್ತು.

ಆರಂಭದಲ್ಲಿ ಕೊಂಡದಕುಳಿಯವರ ಪುತ್ರಿಯರಿಂದ ಬಾಲಗೋಪಾಲ ಪೂರ್ವರಂಗ ಚೆನ್ನಾಗಿ ಮೂಡಿ ಬಂತಾದರೂ, ಇದು ಕೂಡಾ ನ್ರುತ್ಯ ರೂಪಕದಂತೆ ತೋರಿ ಬಂತು.

ಅಪರೂಪದ ಪ್ರಸಂಗವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ ಸಂಘಟಕರಿಗೆ ವಂದನೆಗಳು. ಹತ್ತು ನಿಮಿಶದ ಸನ್ಮಾನ ಐವತ್ತು ನಿಮಿಷಗಳನ್ನು ನುಂಗಿದ್ದು (ಸಿನೆಮಾ ನಟ ಶ್ರೀಧರರ ಮಾತುಗಾರಿಕೆ ಬೇಕಿತ್ತೆ?) ಮಾತ್ರ ಅಸಹನೀಯವಾಗಿತ್ತು.

Thursday, April 1, 2010

ನೀನೆ ಕುಣಿಸುವೆ ಜೀವರನು - ನೆಬ್ಬೂರರ ಹಾಡುಗಳು



ನೀನೆ ಕುಣಿಸುವೆ ಜೀವರನು - ನೆಬ್ಬೂರು ನಾರಾಯಣ ಭಾಗವತರ ಹಾಡುಗಾರಿಕೆಯ ಸಿ ಡಿ - ಯಕ್ಶಪ್ರೇಮಿಗಳು ಕೇಳಲೇಬೇಕಾದ ಮತ್ತು ಸಂಗ್ರಹಿಸಿಡಲೇಬೇಕಾದ ಸಿ ಡಿ.



ಬಡಗು ತಿಟ್ಟಿನ ಅತ್ಯುತ್ತಮ ಭಾಗವತರಲ್ಲೊಬ್ಬರಾದ ನೆಬ್ಬೂರರ ಹಾಡುಗಳು ದಾಖಲಾದದ್ದು ಕಡಿಮೆಯೇ. ಯಕ್ಶಗಾನ ಆಡಿಯೋ ಕ್ಯಾಸೆಟ್ ಯುಗದಲ್ಲೂ ಅವರ ಬೆರಳೆಣಿಕೆಯ ಕ್ಯಾಸೆಟ್ಟುಗಳಷ್ಟೇ ಬಿಡುಗಡೆಯಾಗಿದ್ದವು. ನೆಬ್ಬೂರರು ’ಕ್ಲಾಸ್’ ಭಾಗವತರು, ಅವರ ಹಾಡುಗಳು ’ಮಾಸ್’ ಪ್ರೇಕ್ಶಕರನ್ನು ಸೆಳೆಯಲಿಲ್ಲ; ನೆಬ್ಬೂರರು ಆ ಪ್ರಯತ್ನವನ್ನೂ ಮಾಡಲಿಲ್ಲ. ಯುಗ ಪ್ರವರ್ತಕ ಕಾಳಿಂಗ ನಾವಡರ ಬಲೆಗೆ ಬೀಳದ ಬಡಗಿನ ಕೆಲವೇ ಕೆಲವು ಭಾಗವತರಲ್ಲಿ ಒಬ್ಬರು ನೆಬ್ಬೂರರು. ಆದ್ದರಿಂದಲೇ ಇಂದು ಬಡಗು ತಿಟ್ಟಿನಲ್ಲಿ ಕಲಬೆರಕೆಯಿಲ್ಲದ ’ಶುದ್ಧ’ ಯಕ್ಶಗಾನದ ಹಾಡನ್ನು ನಾವು ನೆಬ್ಬೂರರ ಮೂಲಕ ಕೇಳುವಂತಾಗಿದೆ. ಆ ಹಾಡಿಗೆ ಶಾಸ್ತ್ರೀಯ ಸಂಗೀತದ ಹಂಗಾಗಲಿ,ಭಾವಗೀತೆಯ ಬೆರಕೆಯಾಗಲಿ, ಸಿನೆಮಾ ಹಾಡಿನ ಪ್ರಭಾವವಾಗಲಿ, ಚಪ್ಪಾಳೆಯ ಮೋಹವಾಗಲಿ ಇಲ್ಲವೇ ಇಲ್ಲ. ಅವರು ಹಾಡಿದ್ದಷ್ಟೂ ಶುದ್ಧಾತಿಶುದ್ಧ ಯಕ್ಶಗಾನದ್ದೇ ಮಟ್ಟುಗಳು.

ಎರಡು ಭಾಗಗಳಲ್ಲಿ ಬಿಡುಗಡೆಯಾದ ಈ ಸಿ ಡಿ ಯ ಧ್ವನಿ ಮುದ್ರಣ ಅತ್ಯುತ್ತಮ. ಹಾಡಿನ ರಾಗ ಅಥವ ಮಟ್ಟಿನ ಬಗ್ಗೆ ಯಾವುದೇ ವಿವರಗಳಿಲ್ಲದಿರುವುದೊಂದೇ ಈ ಸಿ ಡಿ ಯ ದೊಡ್ಡ ದೋಷ. ನೆಬ್ಬೂರರ ಅತ್ಯುತ್ತಮ ಎನ್ನಬಹುದಾದ ಎಲ್ಲಾ ಪದ್ಯಗಳು ಈ ಸಿ ಡಿ ಯಲ್ಲಿ ದಾಖಲಾಗಿಲ್ಲ.

ನೆಬ್ಬೂರರ ಹಾಡುಗಳ ವಿಡಿಯೋ ಸಿ ಡಿ ಯೂ ಈಗ ಲಭ್ಯ. ಗುಣಮಟ್ಟದ ದ್ರುಷ್ಟಿಯಿಂದ ಆಡಿಯೋ ಸಿ ಡಿ ಉತ್ತಮ. ಮತ್ತೆ ಮತ್ತೆ ಕೇಳಬೇಕಿನುಸುವ ಈ ಸಿ ಡಿ ಯ ಹಾಡುಗಳು ಸಂಗ್ರಹಯೋಗ್ಯ.

Sunday, January 24, 2010

ಯಕ್ಷಬ್ರಹ್ಮ ಅಗರಿಯವರ ಅಪರೂಪದ ಸಿ ಡಿ..




ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿದ್ದ ಅಗರಿ ಶ್ರೀನಿವಾಸ ಭಾಗವತರ ಅಪರೂಪದ ಹಾಡುಗಳ ಸಿ ಡಿ ಬಿಡುಗಡೆಯಾಗಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಇಂದಾದರೂ ಆಯಿತಲ್ಲ ಎಂಬ ಸಂತೋಷದ ನಡುವೆ ಎರಡು ಮಾತು.

ಅಗರಿ ತೆಂಕುತಿಟ್ಟಿನಲ್ಲಿ ಬಹುದೊಡ್ಡ ಹೆಸರು. ಭಾಗವತನೆಂದರೆ ಆತನಿಗೆ ನಿರ್ದೇಶನ ಮತ್ತು ಪದ್ಯರಚನೆಯ ಸಾಮರ್ಥ್ಯವಿರಬೇಕೆಂಬ ಮಾತಿಗೆ ಅಗರಿಯವರು ನಿದರ್ಶನ. ಪದ್ಯ ರಚನೆ ಅವರಿಗೆ ಸಲೀಸು. ಪ್ರಸಂಗ ಪುಸ್ತಕವಿಲ್ಲದಿದ್ದರೂ ಆಟ ಆಡಿಸಬಲ್ಲ ಅಸಾಮನ್ಯ ಪ್ರತಿಭಾಶಾಲಿ. ಯಕ್ಶಗಾನಕ್ಕೆ ನಾಟಕದ ಮಟ್ಟುಗಳನ್ನು, ಹೊಸ ಹೊಸ ರಾಗಗಳನ್ನು ತಂದ ಯಕ್ಶಬ್ರಹ್ಮ. ಇಂದು ತೆಂಕು ಬಡಗು ತಿಟ್ಟುಗಳ ಎಲ್ಲಾ ಭಾಗವತರ ಟ್ರಂಪ್ ಕಾರ್ಡ್ ಆಗಿರುವ ಹಿಂಧೋಳ (ಉತ್ತರಾದಿ ಮಾಲಕಂಸ್) ರಾಗವನ್ನು ಯಕ್ಶಗಾನಕ್ಕೆ ತಂದವರು ಅಗರಿಯವರೇ. ಹಿಂದೂಸ್ತಾನಿಯ ಭೀಂಪಲಾಸ್ (ನಾವಡರ ಪೊಡವಿಪಾತ್ಮಜೆ ಧನುಜೇಂದ್ರನಾ ಕಾಣುತಾ... ನೆನಪಾಗುತ್ತಿದೆಯೇ?) ರಾಗವನ್ನು ಯಕ್ಶಗಾನಕ್ಕೆ ತಂದವರೂ ಈ ಯಕ್ಶಬ್ರಹ್ಮನೇ! ತೆಂಕಿನ ಭಾಗವತಿಕೆ ಎಂದರೆ ಕಿರಿಚುವುದು ಎಂಬುದಕ್ಕೆ ಸ್ಪಶ್ಟ ಅಪವಾದ ಅಗರಿಯವರ ಭಾಗವತಿಕೆ. ಬಿಳಿ ನಾಲ್ಕು ಬಿಳಿ ಐದು ಶ್ರುತಿಯ ಬಗ್ಗೆ ಮಾತನಾಡುವವರು ಗಮನಿಸುತ್ತಾರೆಂದು ಭಾವಿಸುವ.

ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ಇಂದು ಬಳಕೆಯಲ್ಲಿರುವ ಬ್ರಹ್ಮಕಪಾಲ ಪ್ರಸಂಗ ರಚಿಸಿದವರು ಅಗರಿಯವರು. ಈ ಪ್ರಸಂಗದ ಹಾಡುಗಳನ್ನು ಬಲ್ಲವರಿಗೆ ಅವರ ಪದ್ಯ ರಚನೆಯ ಸಾಮರ್ಥ್ಯವನ್ನು ಮತ್ತೆ ಹೇಳಬೇಕಾದ್ದಿಲ್ಲ. ಅಗರಿ ಅವರ ಕಾಲಕ್ಕೆ ಒಬ್ಬ ದೊಡ್ಡ ಸ್ಟಾರ್. ಈಗಲೂ ಕಲಾಭಿಮಾನಿಗಳ ಮನದಲ್ಲಿ ಅವರ ನೆನಪು ಸ್ಥಿರವಾಗಿದೆ. ಅವರ ಹಲವು ಲೈವ್ ರೆಕಾರ್ಡಿಂಗ್ ಗಳು ಕಲಾಸಕ್ತರಲ್ಲಿ ಲಭವಿವೆ. ಅವೆಲ್ಲವೂ ಯಕ್ಶಗಾನ ಪ್ರೇಮಿಗಳಿಗೆ ದೊರಕುವಂತಾಗಲಿ.

ಅವರ ಹಾಡುಗಳ ಸಿ ಡಿ ಹೊರತಂದ ಯಕ್ಶಗಾನ ಮತ್ತು ಲಲಿತಕಲಾ ಅಧ್ಯಯನ ಕೆಂದ್ರ, ಸುರತ್ಕಲ್ ಇವರಿಗೆ ಕಲಾಪ್ರೇಮಿಗಳ ಪರವಾಗಿ ವಂದನೆಗಳು. ಇದೇ ರೀತಿ ದೊಡ್ಡ ಬಲಿಪ, ಜಾನುವಾರಕಟ್ಟೆ, ಕುಂಜಾಲು, ಗುಂಡ್ಮಿ ರಾಮಚಂದ್ರ ನಾವಡ ಮತ್ತು ದಾಸ ಭಾಗವತರ ಸಿ ಡಿ ಗಳು ಯಕ್ಶಗಾನ ಪ್ರೇಮಿಗಳಿಗೆ ದೊರಕುವಂತಾಗಲಿ.

ಅಗರಿಯವರ ಅಭಿಮಾನಿಗಳಾದ ಹಿರಿಯರಿಬ್ಬರು ಬೇರೆ ಬೇರೆ ಸಂದರ್ಭಗಳಲ್ಲಿ ಬಡಗು ತಿಟ್ಟಿನ ಭಾಗವತರಿಬ್ಬರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ನೆನಪಾಗುತ್ತಿದೆ.

"ಕಾಳಿಂಗ ನಾವಡ ಒಬ್ಬ ಭಾಗವತ ಹೌದು, ಅಗರಿಯವರಂತೆ ಪ್ರಸಂಗ ರಚಿಸಬಲ್ಲ ಸಾಮರ್ಥ್ಯ, ರಂಗ ನಿರ್ದೇಶನ ಮಾಡಬಲ್ಲ ಇನ್ನೊಬ್ಬ ಭಾಗವತ ಕಾಳಿಂಗ ನಾವಡ"

" ಧಾರೇಶ್ವರರ ಆಟ ನೋಡುತ್ತಿದ್ದರೆ ನನಗೆ ಅಗರಿಯವರ ನೆನಪಾಗುತ್ತಿದೆ. ಭಾವಪೂರ್ಣ, ಸ್ಪಶ್ಟ ಹಾಡುಗಾರಿಕೆ, ರಂಗತಂತ್ರ ನನಗೆ ಅಗರಿಯವರನ್ನು ನೆನಪಿಸಿತು"

ಅಗರಿಯವರು ಯಕ್ಷಗಾನಕ್ಕೆ ಅಳವಡಿಸಿದ ಹಿಂಧೋಳ ರಾಗವೊಂದರಿಂದಲೇ ಅಜರಾಮರ. ಅವರ ಹಿಂಧೋಳ ರಾಗದ ಹಾಡೊಂದನ್ನು ಕೇಳಿ.

Monday, January 4, 2010

ಯುಗ ಪ್ರವರ್ತಕನ ಅಪರೂಪದ ಹಾಡು ನೆನಪಾದಾಗ...

ವಾಲಿ ರಾವಣರ ಯುದ್ಧದ ಸನ್ನಿವೇಶ ಯಕ್ಶಗಾನದಲ್ಲಿ ಅಪರೂಪ. ಲಂಕಾದಹನ ಪ್ರಸಂಗದಲ್ಲಿ ಸೀತೆ ಸರಮೆಗೆ ಹೇಳುತ್ತಾಳೆ - ’ ಬಲ್ಲಿದನಾದರೆ ಶಿವನ ಬಿಲ್ಲನೆತ್ತದೇಕೆ ಪೋದ, ಕಲ್ಲೆದೆಯಾದರೆ ತೊಟ್ಟಿಲಲಿ ಕಟ್ಟಿಸಿಕೊಂಬನೆ’- ವಾಲಿ ರಾವಣನನ್ನು ಅಂಗದನ ತೊಟ್ಟಿಲಿಗೆ ಕಟ್ಟಿ ತೂಗಿಸಿದ ಸನ್ನಿವೇಶ ಯಕ್ಷಗಾನದಲ್ಲಿ ಅಪರೂಪ.

ಸಾಲಿಗ್ರಾಮ ಮೇಳ ಕಾಳಿಂಗ ನಾವಡರ ನಿರ್ದೆಶನದಲ್ಲಿ ಸಮಗ್ರ ರಾವಣ ಪ್ರದರ್ಶನ ನೀಡುತ್ತಿದ್ದಾಗ ಈ ಅಪರೂಪದ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದ್ದರು. ನಾನು ನೋಡಿದ ೧೯೮೭ರ ಒಂದು ಪ್ರದರ್ಶನದಲ್ಲಿ ಬಿಳಿಯೂರು ಕ್ರಿಶ್ಣಮೂರ್ತಿಯವರು ವಾಲಿಯಾಗಿಯೂ, ಜಲವಳ್ಳಿಯವರು ರಾವಣನಾಗಿಯೂ ಅಭಿನಯಿಸಿದ್ದರು.

ಇಲ್ಲಿ ನಾನು ಅಗತ್ಯವಾಗಿ ಹಂಚಿಕೊಳ್ಳಬೇಕಾದ್ದೆಂದರೆ ನಾವಡರ ಕೆಲವು ಅಪರೂಪದ ಹಾಡುಗಳು. ಈ ಮಟ್ಟಿನ ಹಾಡು ನನಗೆ ತಿಳಿದಂತೆ ನಾವಡರ ಅಮ್ರುತಮತಿ ಕ್ಯಾಸೆಟ್ಟಿನಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಂಡಿದೆ. ಮಗ ಅಂಗದನನ್ನು ವಾಲಿ ಮುದ್ದಿಸುವ, ರಾವಣ ನಾಚಿ ತಲೆತಗ್ಗಿಸುವ ಸನ್ನಿವೇಶಗಳ ಅಪರೂಪದ ಹಾಡುಗಳನ್ನು ಕೇಳಿ.

ಇಂಥಹ ಅಪರೂಪದ ನಾವಡ ಸ್ಟೈಲ್ ಒಂದೇ ಎರಡೇ! ಅದ್ದರಿಂದಲೇ ಆತ ನಿಜ ಅರ್ಥದಲ್ಲಿ ಯಕ್ಶಗಾನ ಭಾಗವತಿಕೆಯ ಯುಗ ಪ್ರವರ್ತಕ! ನೆಬ್ಬೂರರ ಬಗ್ಗೆ, ಕಡತೋಕರ ಬಗ್ಗೆ, ಯಾಜಿ ಭಾಗವತ ಬಗ್ಗೆ ಪುಸ್ತಕಗಳು ಬಂದಿವೆ. ಭಾಗವತಿಕೆಯ ಯುಗ ಪ್ರವರ್ತಕನ ಜೀವನ, ಸಾಧನೆಗಳ ಪುಸ್ತಕ ಬರದಿರುವುದು ಆಶ್ಚರ್ಯವೂ ಹೌದು, ಕಲಾಪ್ರೇಮಿಗಳು ತಲೆತಗ್ಗಿಸಬೇಕಾದ ವಿಷಯವೂ ಹೌದು.