Monday, July 14, 2008

ಮರೆತೇನೆಂದರು ಮರೆಯಲಾಗದ ಗದಾಯುದ್ಧ





ಚಿಟ್ಟಾಣಿಯವರ ಈ ವಯಸ್ಸಿನಲ್ಲಿ ಖಂಡಿತ ಇಂಥದ್ದೊಂದು ಅಮೋಘ ಕೌರವನ ಪಾತ್ರವನ್ನು ನಾನು ನಿರೀಕ್ಶಿಸಿರಲಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತ ಈ ಪ್ರದರ್ಶನದ ಕುರಿತು ಎರಡು ಮಾತು. ಮಾಗಧ ವಧೆ-ಗದಾಯುದ್ಧ ಪ್ರದರ್ಶನ ನಡೆದದ್ದು ರವೀಂದ್ರ ಕಲಾಕ್ಶೇತ್ರದ ಸಂಸ ಬಯಲು ರಂಗಮಂದಿರದಲ್ಲಿ. ಭರ್ಜರಿ ಶಾಮಿಯಾನ ಮತ್ತು ಮುಚ್ಚಿಗೆ ರಂಗಸ್ಥಳದ ವ್ಯವಸ್ಥೆ ಮಾಡಿದ್ದ ಸಂಯೋಜಕ ರಮೇಶ ಹೆಗಡೆಯವರ ಸಾಹಸವನ್ನು ಮೆಚ್ಚಲೇಬೇಕು.

ಹವ್ಯಾಸಿ ಕಲಾವಿದರಾದ ಹಾವಳಿಮನೆ ಜಿ ನ್ ಹೆಗಡೆಯವರ ಮಾಗಧನ ಬಗ್ಗೆ ಬರೆಯದಿರುವುದೇ ಕ್ಷೇಮ. ಕೆರೆಮನೆ ಶಿವರಾಮ ಹೆಗಡೆ, ಚಿಟ್ಟಾಣಿ, ಗೋಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿಯಂಥ ಮಹಾನ್ ಕಲಾವಿದರು ಒಂದು ತಪಸ್ಸಿನ ರೀತಿಯಲ್ಲಿ ಕಟ್ಟಿ ಬೆಳೆಸಿದ ಯಕ್ಶಗಾನದ ಮಾಗಧನ ಕಗ್ಗೊಲೆ ನಡೆಯಲು ಖಂಡಿತ ಇಂಥದ್ದೊಂದು ವೇದಿಕೆ ಬೇಕಾಗಿರಲಿಲ್ಲ. ಹವ್ಯಾಸಿ ಕಲಾವಿದರು ವ್ರುತ್ತಿ ಕಲಾವಿದರ ಪ್ರದರ್ಶನಗಳಿಂದ ದೂರವಿದ್ದಷ್ಟೂ ಯಕ್ಶಗಾನಕ್ಕೆ ಕ್ಷೇಮ. ಶಾಲಾ ವಾರ್ಷಿಕೋತ್ಸವ, ಗಣೇಶೋತ್ಸವ ಮುಂತಾದ ವೇದಿಕೆಗಳಿರುವುದೇ, ವೇಶ ಕಟ್ಟುವ ತೆವಲು ತೀರಿಸಿಕೊಳ್ಳುವುದಕ್ಕೆ. ಅಲ್ಲಿ ಪ್ರೇಕ್ಷಕ ಕೂಡಾ ಅದೇ ಮನಸ್ತಿಥಿಯಿಂದ ಬಂದಿರುವುದರಿಂದ ಯಾರಿಗೂ ನಷ್ಟವಿಲ್ಲ. ಇಂಥ ವೇದಿಕೆಗಳಲ್ಲಿ ವೇಶ ಕಟ್ಟಿ ರಂಗಕ್ಕೆ ಬರಬಲ್ಲವನೇ ವೇಶಧಾರಿ, ತಾಳ ಹಿಡಿದು ರಂಗದಲ್ಲಿ ಕೂರಬಲ್ಲವನೇ ಭಾಗವತ. ಈ ಅನುಭವದಿಂದ ವ್ರುತ್ತಿ ಕಲಾವಿದರ ಜತೆ ಕುಣಿಯುತ್ತೇನೆ ಎಂಬುದು ’ನವಿಲ ಕಂಡು ಕೆಂಭೂತ ಕುಣಿಯಲೆತ್ನಿಸಿದಂತೆ’ ಎಂದು ವಿಧಿಯಿಲ್ಲದೆ ಹೇಳಬೇಕಾಗಿದೆ.

ಯಕ್ಶ ಮಾಗಧನ ಕಗ್ಗೊಲೆಯನ್ನು ಮರೆಸಿದ ಪ್ರದರ್ಶನ ಗದಾಯುದ್ಧ. ತೋಟಿಮನೆಯವರ ಭೀಮ, ಅಶೋಕ ಭಟ್ಟರ ಮುರಹರನ ಪಾತ್ರವೂ ಕಳೆಗಟ್ಟಿತ್ತು. ಚಿಟ್ಟಾಣಿಯವರ ಕೌರವನಂತೂ ಕಣ್ಣಿಗೆ ಹಬ್ಬ. ಜಲದಿಂದ ಎದ್ದು ಬಂದವನು ಚಿಟ್ಟಾಣಿಯಲ್ಲ..ಪಾಂಡವರ ತಲೆಯ ಬಡಿವೆನು ಎಂದು ಛಲದಿಂದೆದ್ದ ಬಂದ ಕುರುಕ್ಷೇತ್ರದ ಕೌರವನೇ ಇರಬೇಕು ಎಂದು ನೋಡುಗರಿಗನಿಸಿದ್ದು ಸುಳ್ಳಲ್ಲ. ಮಯ್ಯ ಬಾಗು ಬಳುಕು, ಹುಬ್ಬು ಮತ್ತು ಕಣ್ಣುಗಳ ಸಾಟಿಯಿಲ್ಲದ ಚಲನೆ, ಭಾವಕ್ಕನುಗುಣವಾಗಿ ಬಿರಿಯುವ, ಮುದುಡುವ ತುಟಿಗಳು, ಸನ್ನಿವೇಶಕ್ಕೆ ತಕ್ಕಂತೆ ಆಯ ಆಕಾರವನ್ನು ಪಡೆಯುವ ತೋಳುಗಳು, ಎಣೆಯಿಲ್ಲದ ಹಸ್ತಾಭಿನಯ - ಚಿಟ್ಟಾಣಿಯವರಿಗೆ ಚಿಟ್ಟಾಣಿಯವರೇ ಸಾಟಿ.

ವಿಶೇಷವೆಂದರೆ ಭಾಗವತ ಕೊಳಗಿಯವರು ಧಾರೇಶ್ವರ ನಿರ್ಮಿತ ’ನೋಡಿದಂ ವಿಶ್ವಾಧಾರ ಮೂರ್ತಿಯಂ’ ಎಂಬ ಭಾಮಿನಿಯನ್ನು ಕಪಟ ನಾಟಕ ರಂಗ ಪದ್ಯಕ್ಕೆ ಮೊದಲು ಬಳಸಿಕೊಂಡದ್ದು. ಭಾಗವತ ಸುಬ್ರಮಣ್ಯ ಧಾರೇಶ್ವರರ ಕಲ್ಪನೆಯ ಈ ಸನ್ನಿವೇಶ ಈಗ ಬಹುತೇಕ ಒಂದು ಸಂಪ್ರದಾಯದಂತೆಯೇ ಬಳಸಲ್ಪಡುತ್ತಿದೆ. ತಮ್ಮ ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಧಾರೇಶ್ವರರು ಈ ಪದ್ಯವನ್ನು ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಬರೆಯಿಸಿ, ಮೊದಲ ಬಾರಿಗೆ ಚಿಟ್ಟಾಣಿಯವರ ಕೌರವನಿಗೆ ಬಳಸಿದರು. ಕೌರವ ತನ್ನ ಅಂತರಂಗ ವಿಮರ್ಶೆ ಮಾಡಿಕೊಳ್ಳುವ ಈ ಭಾಮಿನಿಗೆ ಚಿಟ್ಟಾಣಿಯವರ ಅಭಿನಯ ಅದ್ಭುತ. ಕೊಳಗಿಯವರ ಭಾಗವತಿಕೆ , ಶಂಕರ ಭಾಗವತ ಮತ್ತು ವಿಘ್ನೇಶ್ವರ ಕೆಸರಕೊಪ್ಪ ಅವರ ಹಿಮ್ಮೇಳ ಉತ್ತಮವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೊಳಗಿಯವರ ಭಾಗವತಿಕೆಗೆ ಕಳೆಯೇರುತ್ತಿದೆ.

ಒಟ್ಟಿನಲ್ಲಿ ಈ ಗದಾಯುದ್ಧ ’ಮರೆತೇನೆಂದರು ಮರೆಯಲಾಗದ’ ಪ್ರದರ್ಶನ ! ಸಂಯೋಜಕರಿಗೆ ಯಕ್ಷ ರಸಿಕರ ಪರವಾಗಿ ಅಭಿನಂದನೆಗಳು, ಅಭಿವಂದನೆಗಳು!

Tuesday, July 8, 2008

ಅಮ್ಮಣ್ಣಾಯರು ಬಡಗಿಗೆ?




ಭಾಗವತ ದಿನೇಶ ಅಮ್ಮಣ್ಣಾಯರು ಸಾಲಿಗ್ರಾಮ ಮೇಳದ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ ಎಂಬ ಪತ್ರಿಕಾ ಜಾಹೀರಾತು ಕಾಣಿಸಿಕೊಂಡಿದೆ. ಕೆಲವು ವರ್ಶದ ಹಿಂದೆ ಅಮ್ಮಣ್ಣಾಯರಿಗೆ ಸಾಲಿಗ್ರಾಮ ಮೇಳದಿಂದ ಕರೆ ಬಂದ ವರ್ತಮಾನವಿತ್ತು. ಏಕೋ ಏನೋ ಅವರು ಆಗ ಬಡಗು ತಿಟ್ಟಿಗೆ ಬರುವ ಮನಸ್ಸು ಮಾಡಿರಲಿಲ್ಲ. ಅಮ್ಮಣ್ಣಾಯರಂತ ಹಿರಿಯ ಭಾಗವತರಿಗೆ ಬಡಗು ತಿಟ್ಟಿಗೆ ಹೊಂದಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಒಂದು ಸಾಲಿಗ್ರಾಮ ಮೇಳದಲ್ಲಿ ಯಾಜಿಯವರದ್ದೇ ಕೊನೆಯ ಮಾತು. ಇನ್ನೊಂದು ಬಡಗು ತಿಟ್ಟಿನಲ್ಲಿರುವ ಹಲವು ವೈವಿಧ್ಯಗಳನ್ನು ಕರಗತ ಮಾಡಲು ಸಾಮನ್ಯವಾಗಿ ಒಬ್ಬ ಭಾಗವತಕನಿಗೆ ಸುಮಾರು ಐದು ವರುಶಗಳು ಬೇಕು. ಈ ವೈವಿಧ್ಯಗಳ ಅನುಭವವಿಲ್ಲದೆ ಬಡಗು ತಿಟ್ಟಿನಲ್ಲಿ ಭಾಗವತಕನಾಗಿ ಮಿಂಚುವುದು ಸುಲಭವಲ್ಲ. ಈ ಸವಾಲುಗಳ ಮಧ್ಯೆ ಅಮ್ಮಣ್ಣಾಯರು ಎಷ್ಟು ಯಶಸ್ವಿಯಾಗುತ್ತಾರೆ ಎಂದು ಹೇಳುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಸಾಲಿಗ್ರಾಮ ಮೇಳ ಹೆಚ್ಚಾಗಿ ಆಡುವುದು ಹೊಸ ಪ್ರಸಂಗಗಳನ್ನೆ. ಹೊಸ ಪ್ರಸಂಗಗಳಲ್ಲಿ ಸಿನೆಮಾ, ಸಂಗೀತದ ಹಾಡುಗಳನ್ನು ತುರುಕುವುದು ಸುಲಭ. ಈ ಕಾರಣದಿಂದಾಗಿ ಅಮ್ಮಣ್ಣಾಯರು ಬಡಗು ತಿಟ್ಟಿನಲ್ಲಿ ಒಂದು ಹೊಸ ಅಲೆ ಎಬ್ಬಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Wednesday, July 2, 2008

ಮೇಳ ನಿಲ್ಲುವುದು ಎಂಬ ಸುದ್ದಿ..

ಹೊಸ ಯಕ್ಷಗಾನದ ಮೇಳ ಹೊರಟಾಗ ಸುದ್ದಿಯಾಗುವಂತೆ, ಮೇಳ ನಿಂತಾಗ ಸುದ್ದಿಯಾಗುವುದು ಕಡಿಮೆಯೇ. ಅಲ್ಲಲ್ಲಿ ಮಾತಿನ ನಡುವೆ ಆ ಮೇಳ ಮುಂದಿನ ವರ್ಷದಿಂದ ಇಲ್ಲವಂತೆ ಎಂಬ ಮಾತು ಬಿಟ್ಟರೆ ಪತ್ರಿಕೆಯಲ್ಲಂತೂ ಸುದ್ದಿಯಾಗುವುದು ತೀರಾ ಅಪರೂಪವೇ. ಇತ್ತೀಚೆಗೆ ಎಡನೀರು ಮೇಳ ಮಾತ್ರ ಬೇರೆಯೇ ಕಾರಣಕ್ಕೆ ಪತ್ರಿಕೆಗಳಲ್ಲಿ ಸುದ್ದಿಯಾದದದ್ದು ಒಂದು ದುರಂತ ಎನ್ನಬೇಕಷ್ಟೆ.

ಮೂಲಗಳನ್ನು ನಂಬುವುದಾದರೆ, ಎಡನೀರು ಮೇಳ ಇತಿಹಾಸವನ್ನು ಸೇರುವುದು ಖಚಿತ. ನಾಲ್ಕು ವರುಶಗಳ ಹಿಂದೆ, ತೆಂಕು ತಿಟ್ಟಿನ ಗಜಮೇಳವಾಗಿ ಡೇರೆ ಮೇಳವಾಗಿ ತಿರುಗಾಟಕ್ಕೆ ಹೊರಟ ಎಡನೀರು ಮೇಳ ಬಹುಶ: ಇನ್ನೊಂದು ನೆನಪು ಮಾತ್ರ. ಪದ್ಯಾಣ, ಅಮ್ಮಣ್ಣಾಯ, ಶಬರಾಯ ಮುಂತಾದ ಪ್ರಸಿದ್ಧ ಭಾಗವತರನ್ನು ಒಳಗೊಂಡ ಎಡನೀರು ಮೇಳ ತೆಂಕು ತಿಟ್ಟಿನ ಯಕ್ಶಗಾನವನ್ನು ಪುನರುತ್ಥಾನ ಮಾಡುವುದೆಂದೇ ಕಲಾಭಿಮಾನಿಗಳು ನಂಬಿದ್ದರು. ಮೊದಲ ತಿರುಗಾಟದಲ್ಲಿ ತುಳು ಪ್ರಸಂಗಗಳನ್ನು ಬಿಡಲೊಲ್ಲದೆ, ಪೌರಾಣಿಕ ಪ್ರಿಯರ ಅಸಮಾಧಾನಕ್ಕೆ ಗುರಿಯಾದರೂ ತನ್ನ ಮಿತಿಯೊಳಗೆ ಈ ಮೇಳ ಅಲ್ಲಲ್ಲಿ ಉತ್ತಮ ಪೌರಾಣಿಕ ಪ್ರದರ್ಶನಗಳನ್ನು ಪ್ರದರ್ಶಿಸಿ, ಕಲಾಭಿಮಾನಿಗಳಲ್ಲಿ ಆಸೆಯ ಮಿಂಚೊಂದನ್ನು ಹರಿಸಿದ್ದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಬಹುಶ: ಎರಡನೇ ತಿರುಗಾಟದಲ್ಲಿ ಎಂದು ನನ್ನ ನೆನಪು. ಮೊತ್ತ ಮೊದಲ ಬಾರಿಗೆ ಯಕ್ಷಗಾನ ಪ್ರಪಂಚದ ರಾಜಕೀಯ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಯಿತು. ಮಠಾಧಿಪತಿಯೊಬ್ಬರಿಂದ ಪದ್ಯಾಣ ಭಾಗವತರಿಗೆ ಅವಮಾನವಾಯಿತು ಎಂಬ ಕಾರಣಕ್ಕಾಗಿಯೇ ಎಡನೀರು ಮೇಳ ಎರಡು ಹೋಳಾಗಿ, ಹೊಸನಗರ ಮೇಳ ಜನ್ಮ ತಾಳಿತು. ಪ್ರಮುಖ ಕಲಾವಿದರ ಒಂದು ಗುಂಪು ಹೊಸನಗರ ಮೇಳವನ್ನು ಸೇರಿತು. ಒಂದು ವರುಶ ತಿರುಗಾಟವನ್ನು ಮುಗಿಸಿದ ಎಡನೀರು ಮೇಳ, ಈ ವರುಶದ ತಿರುಗಾಟದಲ್ಲಿ ಬೇರೆಯೇ ಕಾರಣಕ್ಕಾಗಿ ಸುದ್ದಿಯಾಯಿತು. ಪೆರ್ಡೂರು ಮೇಳದ ನಾಗವಲ್ಲಿ ಪ್ರಸಂಗವನ್ನು ಅನುಕರಿಸಿ ನಾಗನಿಧಿ ಎಂಬ ಪ್ರಸಂಗವನ್ನು ಎರಡು ರಂಗಸ್ಥಳಗಳೊಂದಿಗೆ ಪ್ರದರ್ಶಿಸಿದರೂ ಪ್ರಸಂಗ ದಯನೀಯ ಸೋಲನ್ನನುಭವಿಸಿತು. ಒಂದು ಕಾಲಕ್ಕೆ ತುಳು ಪ್ರಸಂಗಗಳ ನಿರ್ದೇಶನಕ್ಕೆ ಹೆಸರಾಗಿದ್ದ ಅಮ್ಮಣ್ಣಾಯರು ಕೂಡಾ ಈ ಸೋಲಿನಿಂದ ಮಂಕಾದರು. ಬಹುತೇಕ ಈ ತಿರುಗಾಟದ ಎಲ್ಲ ಪ್ರಸಂಗಗಳು ಏಡನೀರಿನಲ್ಲಿ ಸೇವೆಯ ರೂಪದಲ್ಲೇ ನಡೆದುವು. ಪುತ್ತೂರಿನ ಜಾತ್ರೆಯ ಸಮಯದಲ್ಲಿ ಶನೀಶ್ವರ ಮಹಾತ್ಮೆ ಮತ್ತು ಅಗ್ರಪೂಜೆ ಎಂಬ ಎರಡು ಪ್ರದರ್ಶನಗಳು ನಿಗದಿಯಾಗಿದ್ದವು. ಆದರ ಕಲಾವಿದರ ಕೊರತೆಯಿಂದಾಗಿ ಅಗ್ರಪೂಜೆ ಪ್ರಸಂಗವೇ ನಡೆಯದೆ, ಮೇಳ ಮುಳುಗುತ್ತಿರುವ ಹಡಗು ಎಂಬ ಅಭಿಪ್ರಾಯವನ್ನು ಕಲಾಭಿಮಾನಿಗಳಲ್ಲಿ ಮೂಡಿಸಿತ್ತು.

ರಂಗದ ಹಿಂದೆ ಮೇಳದ ಮೆನೇಜರ್ (ಕಲಾವಿದರೂ ಹೌದು) ಮತ್ತು ಇನ್ನೋರ್ವ ಕಲಾವಿದರ ನಡುವೆ ಕಾಳಗ ನಡೆದು ಆ ದಿನ ಪ್ರದರ್ಷನ ರದ್ದಾದದ್ದು ಈಗ ಗುಟ್ಟೇನೂ ಅಲ್ಲ. ಬೆಂಗಳೂರಿನ ಪ್ರದರ್ಶನದ ವೇಳೆಗೆ ಕಲಾವಿದರು ಒಮ್ಮೆ ಈ ಬಾರಿಯ ತಿರುಗಾಟ ಮುಗಿದರೆ ಸಾಕು ಎಂಬ ಸ್ಥಿತಿ ತಲಪಿದ್ದರು. ಒಂದು ವರ್ತಮಾನದ ಪ್ರಕಾರ ಕೊನೆಯ ಸೇವೆಯಾಟವೇ ನಡೆದಿಲ್ಲವಂತೆ. ಈಗಾಗಲೇ ಕೆಲವು ಕಲಾವಿದರು ಬೇರೆ ಮೇಳವನ್ನು ಸೇರಿಯಾಗಿದೆ. ತಾಳಮದ್ದಲೆ ಕ್ಶೇತ್ರದಲ್ಲಿ ಪರಿಣಿತರಾದ ಮಾತುಗಾರ ಕಲಾವಿದರೊಬ್ಬರು ಹೊಸನಗರ ಮೇಳವನ್ನು ಸೇರಿದ್ದಾರೆ ಎಂಬ ಸುದ್ದಿ. ಇದು ಹೊಸನಗರ ಮೇಳಕ್ಕೆ ಎಷ್ಟು ’ಚೆನ್ನ’ ವೋ ತಿಳಿಯದು. ಮಾತುಗಾರರಿಂದಾಗಿ ಸಾಮಾನ್ಯ ಪ್ರೇಕ್ಷಕನಿಂದ ದೂರವಾಗಿದ್ದ ತೆಂಕು ತಿಟ್ಟು ಯಕ್ಶಗಾನ ಮತ್ತೆ ಮಾತುಗಾರರ ಸೇರ್ಪಡೆಗೆ ಹಾತೊರೆಯುವುದು ಒಂದು ದುರಂತವೇ.

ಹೊಸನಗರ ಮೇಳವಾಗಲೀ, ಎಡನೀರು ಮೇಳವಾಗಲಿ ಕಮರ್ಷಿಯಲ್ ಸಕ್ಸೆಸ್ ಪಡೆದ ಮೇಳಗಳಲ್ಲ.ಈ ಮೇಳಗಳ ಪ್ರದರ್ಶನಗಳಾಗುವುದು ಬಹುತೇಕ ಮಠಗಳ ಭಕ್ತಾದಿಗಳಿಂದ ಅಥವಾ ತೆಂಕುತಿಟ್ಟಿನ ’ಹಿತರಕ್ಷಕ’ರ ಸಹಕಾರದಿಂದ. ಈ ಹಿನ್ನಲೆಯಲ್ಲಿ ಹೊಸನಗರ ಮೇಳ ಎಷ್ಟು ವರುಶ ತಿರುಗಾಟ ಮಾಡಲು ಶಕ್ತವಾಗಬಹುದು ಎಂಬುದು ಕುತೂಹಲದ ವಿಶಯ.


ತೆಂಕಿನ ಪ್ರಸಿದ್ಧ ಭಾಗವತರಾದ ದಿನೇಶ ಅಮ್ಮಣ್ಣಾಯರಿಗೆ ಈ ವರ್ಶ ಮೇಳವಿಲ್ಲ. ಕರ್ಣಾಟಕ ಮೇಳ ನಿಂತ ಬಳಿಕ ಅಮ್ಮಣ್ಣಾಯರು ಕೆಲವು ವರ್ಷ ಮೇಳದ ತಿರುಗಾಟದಿಂದ ದೂರವುಳಿದು ಬಳಿಕ ಕದ್ರಿ ಮೇಳದಲ್ಲಿ ತಿರುಗಾಟವನ್ನು ನಡೆಸಿದ್ದರು. ಕದ್ರಿ ಮೇಳ ನಿಂತ ಬಳಿಕ ಎಡನೀರು ಮೇಳ ಸೇರಿದ್ದ ತೆಂಕಿನ ಗಾನಕೋಗಿಲೆ ಈ ಬಾರಿ ಮೇಳದ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಕಲಾಭಿಮಾನಿಗಲಲ್ಲಿ ನಿರಾಸೆಯನ್ನು ಮೂಡಿಸಿದೆ.

ಅಮ್ಮಣ್ಣಾಯರಿಗೆ ಶುಭ ಹಾರೈಸುತ್ತಾ, ಅವರು ಬೇಗನೆ ಮೇಳದ ಪ್ರದರ್ಶನದಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇನೆ.

ಕೇಳಿ, ಎಡನೀರು ಮೇಳದ ಪ್ರದರ್ಶನದಲ್ಲಿ ಕೇಳಿಬಂದ ಅಮ್ಮಣ್ಣಾಯರ "ದೀಪಕ ರಾಗವ ಹಾಡಿದ" ಪದ್ಯ, ಪ್ರಸಂಗ ಶನಿ ಮಹಾತ್ಮೆ.

Monday, June 2, 2008

ನಿರಾಸೆ ತಂದ ಉಷಾ ಪರಿಣಯ





ಮೇಳ ಹೊರಟ ಸ್ಥಳದಲ್ಲಿ ಸೇವೆಯಾಟ ನಡೆಯುವುದು ವಾಡಿಕೆ. ಈಗ ಎಲ್ಲ ಸಂಪ್ರದಾಯಗಳಿಗಿಂತಲೂ ಅನುಕೂಲ ಶಾಸ್ತ್ರವೇ ಪ್ರಧಾನವಾದ್ದರಿಂದಲೋ ಏನೋ, ಹೊಸನಗರ ಮೇಳದ ಈ ವರ್ಶದ ಕೊನೆಯ ಸೇವೆಯಾಟ ಬೆಂಗಳೂರು ಮಹಾನಗರದಲ್ಲಿ ನಡೆಯಿತು. ತೆಂಕು ತಿಟ್ಟಿನ ಉತ್ತಮ ಪ್ರದರ್ಶನವನ್ನು ಕಾಣಬಯಸಿ ಬಂದಿದ್ದ ಕಲಾಭಿಮಾನಿಗಳಿಗೆ ಮೊದಲ ಪ್ರದರ್ಶನ ರಂಗನಿರ್ದೇಶನದ ವೈಫಲ್ಯದಿಂದ ಭಾರೀ ನಿರಾಸೆ ಮೂಡಿಸಿತು.

ಮಧ್ಯಾಹ್ನ ೨.೩೦ ರಿಂದ ರಾತ್ರಿ ೯.೩೦ರವರೆಗೆ ಮೂರು ಪರಿಣಯದ (ಉಶಾ ಪರಿಣಯ, ಜಾಂಬವತಿ ಪರಿಣಯ, ಲಕ್ಷ್ಮೀ ಸ್ವಯಂವರ) ಕಥಾನಕಗಳೊಂದಿಗೆ ಸಂಯೋಜಿಸಲ್ಪಟ್ಟ ಯಕ್ಷಗಾನವು ಮೊದಲ ಪ್ರಸಂಗದೊಂದಿಗೇ ಮುಗ್ಗರಿಸಿತು. ಸಂಜೆ ೬.೩೦ ಆದರೂ ಮೊದಲ ಪ್ರಸಂಗವೇ ಮುಗಿಯಲಿಲ್ಲ. ತಾಳ್ಮೆ ಕಳೆದುಕೊಂದ ಕೆಲವು ಪ್ರೇಕ್ಷಕರು ಹೊರನಡೆದರು. ಮಂಟಪ ಪ್ರಭಾಕರ ಉಪಾಧ್ಯ ಮತ್ತು ಯಲಗುಪ್ಪ ಸುಬ್ರಮಣ್ಯರ ಜೋಡಿ ವೇಷಗಳು ತೆಂಕಿನ ಹಿಮ್ಮೇಳಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸುತ್ತಿದ್ದುದು ಸ್ಪಷ್ಟ. ಸುಮಾರು ಎರಡು ಘಂಟೆಗೂ ಹೆಚ್ಚು ಕಾಲ ಈ ವೇಷಗಳು ರಂಗದಲ್ಲಿದ್ದು ಪ್ರೇಕ್ಷಕನನ ತಾಳ್ಮೆಯನ್ನು ಪರೀಕ್ಷಿಸಿದವು. ಮಂಟಪರಂತೂ ತಮ್ಮ ಏಕವ್ಯಕ್ತಿ ಪ್ರದರ್ಶನದ ಗುಂಗಿನಲ್ಲೇ ಅಭಿನಯಿಸಿದರು. ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆ ಏಕೋ ಕಳೆಗಟ್ಟಲಿಲ್ಲ. ಇದ್ದುದರಲ್ಲಿ ದಿವಾಕರ ರೈಯವರ ಅನಿರುದ್ಧನ ವೇಷ ಅಡ್ಡಿಯಿಲ್ಲ ಎನಿಸಿತು. ಈ ಕಲಾವಿದನಿಗೆ ರಂಗದಲ್ಲಿ ಒಳ್ಳೆಯ ಭವಿಷ್ಯವಿದ್ದಂತೆ ತೋರುತ್ತಿದೆ.

ತೆಂಕು ತಿಟ್ಟಿನ "ಹಿತರಕ್ಷಣೆ"ಯ ಉದ್ದೇಶದಿಂದ ಜನ್ಮತಾಳಿದ ಹೊಸನಗರ ಮೇಳಕ್ಕೆ ಬಡಗು ತಿಟ್ಟಿನ ಕಲಾವಿದರ ಅಗತ್ಯವಿದೆಯೆ ಎಂಬುದು ಒಂದು ಪ್ರಶ್ನೆ. ಒಂದು ವೇಳೆ ಅಗತ್ಯವಿದ್ದರೂ ಕೂಡ ಈ ರೀತಿಯ ಸಂಯೋಜನೆ ರಂಗದಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲುದು ಎಂಬುದುರ ಕುರಿತು ಯಕ್ಷಪ್ರೇಮಿಗಳು ಚಿಂತಿಸುವ ಅಗತ್ಯವಿದೆ. ಟೆಂಟ್ ಮೇಳದ ಪ್ರದರ್ಶನಗಳಲ್ಲಿ ಕೂಡ ಈ ರೀತಿಯ ಬೆರಕೆಯಿಂದ ಪ್ರದರ್ಶನದ ಒಟ್ಟಂದಕ್ಕೆ ತೊಡಕಾಗುತ್ತಿರುವುದು ವಾಸ್ತವ. ಕಲಾವಿದರಿಗೆ ಉಭಯ ತಿಟ್ಟುಗಳ ಸರಿಯಾದ ಅನುಭವವಿಲ್ಲದೆ ಪ್ರೇಕ್ಷಕನಿಗೆ ಕಲಸುಮೇಲೋಗರದ ಅನುಭವವಾಗುತ್ತಿರುವುದು ಸುಳ್ಳಲ್ಲ.

ಮೇಳದ ಸೇವೆಯಾಟಕ್ಕೆ ಪ್ರಧಾನ ಭಾಗವತ ಪದ್ಯಾಣರು ಬಂದರೊ ಇಲ್ಲವೋ ತಿಳಿಯಲಿಲ್ಲ. ಪದ್ಯಾಣರು ದುಬೈಯಿಂದ ಬರುತ್ತಾರೆ, ದೇವನಹಳ್ಳಿಯಲ್ಲಿ ಇದ್ದಾರೆ ಎಂಬ ಅಂತೆಕಂತೆಗಳ ಮಧ್ಯೆ ಮೊದಲ ಪ್ರಸಂಗದಿಂದ ಬೇಸತ್ತ ನಾನು, ಎ ಡಿ ಎ ರಂಗಮಂದಿರದ ಮೆಟ್ಟಲಿಳಿದಿದ್ದೆ.

Tuesday, May 27, 2008

ಮತ್ತೆ ನೆನಪಾದರು ಕಾಳಿಂಗ ನಾವಡ







ಮೇ ತಿಂಗಳ ಇಪ್ಪತ್ತೆಂಟನೇ ತಾರೀಖು, ೧೯೯೦. ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕ ಕಾಳಿಂಗ ನಾವಡರು ಕೇವಲ ಮೂವತ್ತಮೂರನೆಯ ವಯಸ್ಸಿನಲ್ಲಿ ರಸ್ತೆ ಅಪಘಾತಕ್ಕೊಳಗಾದ ದುರ್ದಿನ. ಇಂದೂ ಕೂಡಾ ಆ ಘಟನೆಯನ್ನು ನೆನೆದರೆ ಕರುಳು ಚಿವುಕ್ಕೆನ್ನುವ ಅನುಭವ.

ಬಹುಶ: ಬಲಿಪ ಭಾಗವತರು ಮತ್ತು ನೆಬ್ಬೂರು ಭಾಗವತರನ್ನು ಬಿಟ್ಟರೆ ನಾವಡರ ಪ್ರಭಾವಲಯಕ್ಕೆ ಸಿಕ್ಕದ ಭಾಗವತರೇ ಇಲ್ಲವೆಂದರೆ ತಪ್ಪಾಗಲಿಕ್ಕಿಲ್ಲ. ಆ ಭಾಗವತರು ನಾವಡರಂತೆ ಹಾಡುತ್ತಾರೆ ಎಂಬ ಮಾತನ್ನು ಕೇಳಲು ತವಕಿಸುತ್ತಿದ್ದ ಭಾಗವತರಿಗೆ ಲೆಖ್ಖವಿಲ್ಲ. ನಾವಡರ ಪ್ರಭಾವಲಯ ಇಂದೂ ಕೂಡಾ ಮುಂದುವರೆದಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.

ನಾನು ಕಾಳಿಂಗ ನಾವಡರನ್ನು ಮೊದಲಿಗೆ ನೋಡಿದ್ದು ೧೯೭೯ ರಲ್ಲಿ. ಅಂದು ವಿಟ್ಲ ಎಂಬಲ್ಲಿ ಕಾಂಚನಶ್ರೀ ಎಂಬ ಆಟ. ಕಾಳಿಂಗ ನಾವಡರ ಹಾಡು ಕೇಳಲಿಕ್ಕೆಂದೇ ನಮ್ಮ ಬಂಧುಗಳ ಜೊತೆ ಹೋಗಿದ್ದೆ. ಕಾಳಿಂಗ ನಾವಡ ರಂಗಕ್ಕೆ ಬರುವವರೆಗೆ ಅವರ ಕುರಿತೇ ಮಾತು. ಸರಿಯಾಗಿ ಒಂದು ಘಂಟೆ ರಾತ್ರಿ ಕಾಳಿಂಗ ನಾವಡರು ರಂಗ ಪ್ರವೇಶ ಮಾಡುತ್ತಿಂದ್ದಂತೆಯೇ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆ. ಅದಕ್ಕೆ ಮೊದಲು ಕಂಡು ಕೇಳರಿಯದ ಅಮೋಘ ಭಾಗವತಿಕೆ. ಅವರು ಆ ದಿನ ಪ್ರೇತವನ್ನು ಕುಣಿಸಿದ "ಕಿಲ ಕಿಲ ನಗುವುದು ಕಿಲ ಕಿಲ ಕಿಲ ಕಿಲ ನಗುವುದು" ಹಾಡು ಇಂಡು ಕೂಡ ನನ್ನ ನೆನಪಿನಲ್ಲಿದೆ.

ಆ ಬಳಿಕ ಅಕ್ಷರಶ: ನಮ್ಮ ಇಡೀ ಕುಟುಂಬವೇ ಕಾಳಿಂಗ ನಾವಡರ ಅಭಿಮಾನಿಗಳಾದೆವು. ಆಗ ದಕ್ಶಿಣ ಕನ್ನಡದಲ್ಲಿ ಅದರಲ್ಲೂ, ಗಡಿ ಪ್ರದೇಶವಾದ ನಮ್ಮ ಊರಿನಲ್ಲಿ ಬಡಗು ತಿಟ್ಟಿನ ಆಟಗಳಾಗುವುದೇ ಅಪರೂಪವಾಗಿತ್ತು. ಆದರೂ ಅವಕಾಶವಾದಗಲೆಲ್ಲ ಸಾಲಿಗ್ರಾಮ ಮೇಳದ ಆಟಕ್ಕೆ ಹೋಗುತ್ತಿದ್ದೆವು. ಒಮ್ಮೆ ಕುದ್ದುಪದವು ಎಂಬಲ್ಲಿ ನಾಗಶ್ರೀ ಆಟ. ಆ ದಿನ ಆಟ ಆರಂಭವಾದ ಬಳಿಕ ಕಾಳಿಂಗ ನಾವಡರು ಆ ದಿನ ರಜೆ ಎಂಬ ಸುದ್ದಿ. ಆದರೂ ಅವರು ಬರುತ್ತಾರೆ ಎಂಬ ಆಸೆಯಲ್ಲಿ ರಾತ್ರಿ ೨ ಘಂಟೆಯವರೆಗೂ ಕಾದಿದ್ದೆವು. ಈ ಘಟನೆಯನ್ನು ನೆನೆದಾಗಲೆಲ್ಲ ಆಸೆ ನಿರಾಸೆ ಆಯ್ತಲ್ಲ ಎಂಬ ಕಾಳಿಂಗ ನಾವಡರ ಹಾಡೊಂದು ಈಗ ನೆನಪಿಗೆ ಬರುತ್ತಿದೆ.

೧೯೮೬ ರಲ್ಲಿ ಧಾರೇಶ್ವರರ ಅಲೆ ಅರಂಭವಾಗುತ್ತಿದ್ದಂತೆ ಮತ್ತೆ ನಮ್ಮ ಗೆಳೆಯರ ಬಳಗ ಮತ್ತು ಬಂಧುಗಳ ಬಳಗದಲ್ಲಿ ಎರಡು ಬಣಗಳಾದುವು. ಧಾರೇಶ್ವರರಿಗಾಗಿ ಹೊಡೆದಾಡುವ ಪಡೆ ಒಂದಾದರೆ ನಾವಡರ ಪರ ಇನ್ನೊಂದು ಪಡೆ. ಆದ ವಾದ ವಿವಾದ, ಚರ್ಚೆಗಳಿಗೆ ಲೆಕ್ಖವಿಲ್ಲ. ಅದರ ಕುರಿತು ಇನ್ನೊಮ್ಮೆ ವಿವರವಾಗಿ ಬರೆದೇನು.

ಒಮ್ಮೆ ಕನ್ಯಾನದಲ್ಲಿ ಶ್ರುಂಗ ಸಾರಂಗ ಎಂಬ ಆಟ. ಸುಮಾರಾಗಿದ್ದ ಆ ಪ್ರಸಂಗದಲ್ಲಿ ನಾವಡರ ಹಾಡುಗಾರಿಕೆ ಸಾಮನ್ಯವಾಗಿತ್ತು. ಬೆಳಗ್ಗೆ ಕಾಳಿಂಗ ನಾವಡರಲ್ಲಿ ಈ ಕುರಿತು ಹೇಳಿದಾಗ ಅವರು ಸ್ವಲ್ಪವೂ ಬೇಸರ ಮಾಡದೆ ಅದೇ ದಿನ ರಾತ್ರಿ ಪೆರ್ಲ ಎಂಬಲ್ಲಿಗೆ ಬರಲು ಹೇಳಿದರು. ಅಲ್ಲಿ ದೇವಿ ಬನಶಂಕರಿ ಎಂಬ ಆಟ. ಅಂದು ಕಾಳಿಂಗ ನಾವಡರ ಅಮೋಘ ಭಾಗವತಿಕೆ. ಅಭಿಮಾನಿಗಳನ್ನು ಅವರು ಗೌರವಿಸುತ್ತಿದ್ದ ರೀತಿಯೇ ಅದು. ಈ ಘಟನೆ ನದೆದದ್ದು ೧೯೯೦ರಲ್ಲಿ. ಅದೇ ವರ್ಷ ನಾವಡರು ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾದದ್ದು ದುರ್ದೈವ.

ಇನ್ನೊಮ್ಮೆ ಅಡ್ಯನಡ್ಕದಲ್ಲಿ ಆಟ. ಆ ದಿನ ಬೆಳಗ್ಗೆ ನಾವಡರೊಡನೆ ಮಾತನಾದುತ್ತ, ಭಾಗವತರು ಯಾಕೆ ತುಂಬಾ ಲೇಟಾಗಿ ರಂಗಕ್ಕೆ ಬರುತ್ತಾರೆ ಎಂದೊಬ್ಬರು ಪ್ರಷ್ನೆಯನ್ನೆತ್ತಿದರು. ಕಾಳಿಂಗ ನಾವಡರು ಏನೂ ಮಾತನಾಡಲಿಲ್ಲ. ಆ ದಿನ ರಾತ್ರಿ ೧೨ ಘಂಟೆಗೆ ರಂಗಕ್ಕೆ ಬಂದರು!!

ಇಂದು ಧಾರೇಶ್ವರರು ಭಾಗವತರಾಗಿ ನಮ್ಮೊಂದಿಗಿರಲು ಕಾಳಿಂಗ ನಾವಡರೇ ಕಾರಣ ಎಂಬುದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಯಕ್ಷಗಾನದಲ್ಲಿ ಆಸಕ್ತಿ ಇಲ್ಲದ ಧಾರೇಶ್ವರರು ಅಕಸ್ಮಾತ್ ಆಗಿ ಗೋಕರ್ಣದಲ್ಲಿ ನಡೆದ ಆಟವೊಂದರಲ್ಲಿ ನಾವಡರ ಹಾಡುಗಾರಿಕೆಯನ್ನು ಕೇಳಿದರಂತೆ. ರಾತ್ರಿ ಹನ್ನೆರಡು ಘಂಟೆಯವರೆಗೆ ಹೊರಗೆ ಸುತ್ತುತ್ತಿದ್ದ ಧಾರೇಶ್ವರದ ಸುಬ್ರಮಣ್ಯ ಎಂಬ ಯುವಕನ ಕಿವಿಗೆ ಹಿಂದುಸ್ತಾನಿ ಚಾಂದ್ ರಾಗದಲ್ಲಿ "ಹಿತವಾಯ್ತೆ ಪ್ರಿಯನೆ ಅತಿ ಕ್ರೂರಿಯಾದೆಯ..’ ಎಂಬ ಹಾಡು ಕಿವಿಗೆ ಬಿತ್ತಂತೆ. ಯಾರಿದು ಎಂದು ಒಳಕ್ಕೆ ಹೋಗಿ ನೋಡಿದಾಗ ಯುವ ಭಾಗವತನೊಬ್ಬ ಸುಶ್ರಾವ್ಯವಾಗಿ ಹಾಡುವುದನ್ನು ಕಂಡರಂತೆ.. ಉಳಿದದ್ದು ಈಗ ಇತಿಹಾಸ!!

ಕಾಳಿಂಗ ನಾವಡರ ದಿವ್ಯಾತ್ಮಕ್ಕೆ ಅವರ ಪುಣ್ಯ ತಿಥಿಯಂದು ಶ್ರದ್ಧಾಂಜಲಿ ಅರ್ಪಿಸುತ್ತ ಅವರ ಶೈಲಿಯಲ್ಲಿ "ದೇವರು ಒಳ್ಳೇದು ಮಾಡಲಿ" ಎಂದು ಹೇಳಿ ಈ ಲೇಖನಕ್ಕೆ ಪೂರ್ಣವಿರಾಮ ಹಾಕುತ್ತಿದ್ದೇನೆ.

ಕೇಳಿ, ಧಾರೇಶ್ವರರನ್ನು ಯಕ್ಶಗಾನಕ್ಕೆ ಕರೆತಂದ "ಹಿತವಾಯ್ತೆ ಪ್ರಿಯನೆ" ಹಾಡು.
ಕೇಳಿ, ನಾವಡ ಶೈಲಿಯ ಸುರುಟಿ ರಾಗದ ಹಾಡು - "ನಿನ್ನಯ ದರ್ಶನದೀ"

ನಿರೀಕ್ಷಿಸಿ :)

೧.ನಾವಡರಿಗೊಲಿದ ಮಧ್ಯಮಾವತಿ
೨.ನಾವಡ - ಧಾರೇಶ್ವರ, ಪುತ್ತೂರಿನ ಆಟವೊಂದರ ನೆನಪು (ಮತ್ತೆಲ್ಲೂ ಕೇಳಸಿಗದ ಅಪರೂಪದ ಪದ್ಯಗಳೊಂದಿಗೆ)
೩.ಕಾಳಿಂಗ ಗಾನ - ಯುಗ ಪ್ರವರ್ತಕನ ಹಾಡುಗಳ ಅಧ್ಯಯನ

ಮನಸೆಳೆದ ಕುಂಭಕರ್ಣ

ಮೇಳ: ಹೊಸನಗರ
ದಿನಾಂಕ: ೨೬ ಮೇ ೨೦೦೮
ಸ್ಥಲ: ಕಾರಿಂಜ ಆಂಜನೇಯ ದೇವಸ್ಥಾನ, ಬೆಂಗಳೂರು


ಬಹುಶ: ಇಂದಿನ ದಿನಗಳಲ್ಲಿ ಕಮರ್ಶಿಯಲ್ ಪ್ರದರ್ಶನಗಳಲ್ಲಿ ಕಾಣಸಿಗದ ಅಪರೂಪದ ಪ್ರಸಂಗ ಕುಂಭಕರ್ಣ ಕಾಳಗ. ಬಣ್ಣದ ವೇಶದ ಮೂಲಕ ಮತ್ತೆ ತೆಂಕು ತಿಟ್ಟಿನ ಸುವರ್ಣ ಯುಗವನ್ನು ನೆನಪಿಗೆ ತರುತ್ತಿರುವ ಸದಾಶಿವ ಶೆಟ್ಟಿಗಾರರ ಕುಂಭಕರ್ಣ ಈ ಪ್ರಸಂಗದ ಪ್ರಮುಖ ಆಕರ್ಶಣೆ. ದೊಂದಿಯೊಂದಿಗೆ ಸಭೆಯ ಮಧ್ಯೆ ನಡೆದಾಡುವುದು ಶೆಟ್ಟಿಗಾರರ ವಿಶೇಷತೆ. ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವ ಸನ್ನಿವೇಷ, ನಿದ್ದೆಯಿಂದ ಎಚ್ಚೆತ್ತ ಕುಂಭಕರ್ಣನ ಅಟ್ಟಹಾಸ, ರಾವಣ ಕುಂಭಕರ್ಣರ ಸಂವಾದ ಯಕ್ಷರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಭಾಗವತ ಪದ್ಯಾಣ ಗಣಪತಿ ಭಟ್ಟರು ಈ ಪ್ರಸಂಗದುದ್ದಕ್ಕೂ ಬಲಿಪ ಭಾಗವತರ ಶೈಲಿಯಲ್ಲಿ ಹಾಡಿ ಪ್ರಸಂಗದ ಯಶಸ್ಸಿಗೆ ಕಾರಣರಾದರು. ಅದರಲ್ಲೂ "ತಮ್ಮ ಕೇಳೆನಗೂಂದು ತೊಡರು ಬಂದೊದಗಿತು" ಹಾಡು ಅದ್ಭುತವಾಗಿ ಮೂಡಿ ಬಂತು. ಪದ್ಯಾಣರ ಹಾಡುಗಳು ಕೇಳುಗನಿಗೆ ಸ್ಪಷ್ಟವಾದರೆ ಅವರ ಭಾಗವತಿಕೆಗೆ ಇನ್ನಷ್ಟು ರಂಗು ಬಂದೀತು.

ತೆಂಕಿನ ಹಿಮ್ಮೇಳ ಕಲಾವಿದರಲ್ಲಿ ಶಿಸ್ತು ಇಲ್ಲ ಎಂಬ ಮಾತನ್ನು ಸಮರ್ಥಿಸಲೋಸುಗವೊ ಎಂಬಂತೆ ಹಿಮ್ಮೇಳದ ಎಲ್ಲ ಕಲಾವಿದರು ಕೂಡಾ ಮುಂಡಾಸು ಧರಿಸದೆ ಪ್ರದರ್ಶನ ನೀಡಿದ್ದು ವಿಷಾದನೀಯ.

ರಾಮ ಲಕ್ಶ್ಮಣರ ವೇಷಗಾರಿಕೆಯ ಕುರಿತು ಚಿಂತಿಸುವ ಅಗತ್ಯವಿದೆ. ಮೈಬಿಟ್ಟು ಮಾಡಿದ ಈ ವೇಶಗಳು ನಾಟಕದ ವೇಶಗಳಂತೆ ಕಂಡು ಬಂದವು.

ಬೆಂಗಳೂರಿನಲ್ಲೂ ಕೂಡ, ಈ ಯಕ್ಷಗಾನಕ್ಕಾಗಿ ಪ್ರತ್ಯೇಕ ರಂಗಸ್ಥಳ ನಿರ್ಮಿಸಿದ ಸಂಘಟಕರ ಅಭಿರುಚಿಯನ್ನು ಹೊಗಳಲೇಬೇಕು.