Sunday, January 24, 2010

ಯಕ್ಷಬ್ರಹ್ಮ ಅಗರಿಯವರ ಅಪರೂಪದ ಸಿ ಡಿ..




ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿದ್ದ ಅಗರಿ ಶ್ರೀನಿವಾಸ ಭಾಗವತರ ಅಪರೂಪದ ಹಾಡುಗಳ ಸಿ ಡಿ ಬಿಡುಗಡೆಯಾಗಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಇಂದಾದರೂ ಆಯಿತಲ್ಲ ಎಂಬ ಸಂತೋಷದ ನಡುವೆ ಎರಡು ಮಾತು.

ಅಗರಿ ತೆಂಕುತಿಟ್ಟಿನಲ್ಲಿ ಬಹುದೊಡ್ಡ ಹೆಸರು. ಭಾಗವತನೆಂದರೆ ಆತನಿಗೆ ನಿರ್ದೇಶನ ಮತ್ತು ಪದ್ಯರಚನೆಯ ಸಾಮರ್ಥ್ಯವಿರಬೇಕೆಂಬ ಮಾತಿಗೆ ಅಗರಿಯವರು ನಿದರ್ಶನ. ಪದ್ಯ ರಚನೆ ಅವರಿಗೆ ಸಲೀಸು. ಪ್ರಸಂಗ ಪುಸ್ತಕವಿಲ್ಲದಿದ್ದರೂ ಆಟ ಆಡಿಸಬಲ್ಲ ಅಸಾಮನ್ಯ ಪ್ರತಿಭಾಶಾಲಿ. ಯಕ್ಶಗಾನಕ್ಕೆ ನಾಟಕದ ಮಟ್ಟುಗಳನ್ನು, ಹೊಸ ಹೊಸ ರಾಗಗಳನ್ನು ತಂದ ಯಕ್ಶಬ್ರಹ್ಮ. ಇಂದು ತೆಂಕು ಬಡಗು ತಿಟ್ಟುಗಳ ಎಲ್ಲಾ ಭಾಗವತರ ಟ್ರಂಪ್ ಕಾರ್ಡ್ ಆಗಿರುವ ಹಿಂಧೋಳ (ಉತ್ತರಾದಿ ಮಾಲಕಂಸ್) ರಾಗವನ್ನು ಯಕ್ಶಗಾನಕ್ಕೆ ತಂದವರು ಅಗರಿಯವರೇ. ಹಿಂದೂಸ್ತಾನಿಯ ಭೀಂಪಲಾಸ್ (ನಾವಡರ ಪೊಡವಿಪಾತ್ಮಜೆ ಧನುಜೇಂದ್ರನಾ ಕಾಣುತಾ... ನೆನಪಾಗುತ್ತಿದೆಯೇ?) ರಾಗವನ್ನು ಯಕ್ಶಗಾನಕ್ಕೆ ತಂದವರೂ ಈ ಯಕ್ಶಬ್ರಹ್ಮನೇ! ತೆಂಕಿನ ಭಾಗವತಿಕೆ ಎಂದರೆ ಕಿರಿಚುವುದು ಎಂಬುದಕ್ಕೆ ಸ್ಪಶ್ಟ ಅಪವಾದ ಅಗರಿಯವರ ಭಾಗವತಿಕೆ. ಬಿಳಿ ನಾಲ್ಕು ಬಿಳಿ ಐದು ಶ್ರುತಿಯ ಬಗ್ಗೆ ಮಾತನಾಡುವವರು ಗಮನಿಸುತ್ತಾರೆಂದು ಭಾವಿಸುವ.

ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ಇಂದು ಬಳಕೆಯಲ್ಲಿರುವ ಬ್ರಹ್ಮಕಪಾಲ ಪ್ರಸಂಗ ರಚಿಸಿದವರು ಅಗರಿಯವರು. ಈ ಪ್ರಸಂಗದ ಹಾಡುಗಳನ್ನು ಬಲ್ಲವರಿಗೆ ಅವರ ಪದ್ಯ ರಚನೆಯ ಸಾಮರ್ಥ್ಯವನ್ನು ಮತ್ತೆ ಹೇಳಬೇಕಾದ್ದಿಲ್ಲ. ಅಗರಿ ಅವರ ಕಾಲಕ್ಕೆ ಒಬ್ಬ ದೊಡ್ಡ ಸ್ಟಾರ್. ಈಗಲೂ ಕಲಾಭಿಮಾನಿಗಳ ಮನದಲ್ಲಿ ಅವರ ನೆನಪು ಸ್ಥಿರವಾಗಿದೆ. ಅವರ ಹಲವು ಲೈವ್ ರೆಕಾರ್ಡಿಂಗ್ ಗಳು ಕಲಾಸಕ್ತರಲ್ಲಿ ಲಭವಿವೆ. ಅವೆಲ್ಲವೂ ಯಕ್ಶಗಾನ ಪ್ರೇಮಿಗಳಿಗೆ ದೊರಕುವಂತಾಗಲಿ.

ಅವರ ಹಾಡುಗಳ ಸಿ ಡಿ ಹೊರತಂದ ಯಕ್ಶಗಾನ ಮತ್ತು ಲಲಿತಕಲಾ ಅಧ್ಯಯನ ಕೆಂದ್ರ, ಸುರತ್ಕಲ್ ಇವರಿಗೆ ಕಲಾಪ್ರೇಮಿಗಳ ಪರವಾಗಿ ವಂದನೆಗಳು. ಇದೇ ರೀತಿ ದೊಡ್ಡ ಬಲಿಪ, ಜಾನುವಾರಕಟ್ಟೆ, ಕುಂಜಾಲು, ಗುಂಡ್ಮಿ ರಾಮಚಂದ್ರ ನಾವಡ ಮತ್ತು ದಾಸ ಭಾಗವತರ ಸಿ ಡಿ ಗಳು ಯಕ್ಶಗಾನ ಪ್ರೇಮಿಗಳಿಗೆ ದೊರಕುವಂತಾಗಲಿ.

ಅಗರಿಯವರ ಅಭಿಮಾನಿಗಳಾದ ಹಿರಿಯರಿಬ್ಬರು ಬೇರೆ ಬೇರೆ ಸಂದರ್ಭಗಳಲ್ಲಿ ಬಡಗು ತಿಟ್ಟಿನ ಭಾಗವತರಿಬ್ಬರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ನೆನಪಾಗುತ್ತಿದೆ.

"ಕಾಳಿಂಗ ನಾವಡ ಒಬ್ಬ ಭಾಗವತ ಹೌದು, ಅಗರಿಯವರಂತೆ ಪ್ರಸಂಗ ರಚಿಸಬಲ್ಲ ಸಾಮರ್ಥ್ಯ, ರಂಗ ನಿರ್ದೇಶನ ಮಾಡಬಲ್ಲ ಇನ್ನೊಬ್ಬ ಭಾಗವತ ಕಾಳಿಂಗ ನಾವಡ"

" ಧಾರೇಶ್ವರರ ಆಟ ನೋಡುತ್ತಿದ್ದರೆ ನನಗೆ ಅಗರಿಯವರ ನೆನಪಾಗುತ್ತಿದೆ. ಭಾವಪೂರ್ಣ, ಸ್ಪಶ್ಟ ಹಾಡುಗಾರಿಕೆ, ರಂಗತಂತ್ರ ನನಗೆ ಅಗರಿಯವರನ್ನು ನೆನಪಿಸಿತು"

ಅಗರಿಯವರು ಯಕ್ಷಗಾನಕ್ಕೆ ಅಳವಡಿಸಿದ ಹಿಂಧೋಳ ರಾಗವೊಂದರಿಂದಲೇ ಅಜರಾಮರ. ಅವರ ಹಿಂಧೋಳ ರಾಗದ ಹಾಡೊಂದನ್ನು ಕೇಳಿ.

Monday, January 4, 2010

ಯುಗ ಪ್ರವರ್ತಕನ ಅಪರೂಪದ ಹಾಡು ನೆನಪಾದಾಗ...

ವಾಲಿ ರಾವಣರ ಯುದ್ಧದ ಸನ್ನಿವೇಶ ಯಕ್ಶಗಾನದಲ್ಲಿ ಅಪರೂಪ. ಲಂಕಾದಹನ ಪ್ರಸಂಗದಲ್ಲಿ ಸೀತೆ ಸರಮೆಗೆ ಹೇಳುತ್ತಾಳೆ - ’ ಬಲ್ಲಿದನಾದರೆ ಶಿವನ ಬಿಲ್ಲನೆತ್ತದೇಕೆ ಪೋದ, ಕಲ್ಲೆದೆಯಾದರೆ ತೊಟ್ಟಿಲಲಿ ಕಟ್ಟಿಸಿಕೊಂಬನೆ’- ವಾಲಿ ರಾವಣನನ್ನು ಅಂಗದನ ತೊಟ್ಟಿಲಿಗೆ ಕಟ್ಟಿ ತೂಗಿಸಿದ ಸನ್ನಿವೇಶ ಯಕ್ಷಗಾನದಲ್ಲಿ ಅಪರೂಪ.

ಸಾಲಿಗ್ರಾಮ ಮೇಳ ಕಾಳಿಂಗ ನಾವಡರ ನಿರ್ದೆಶನದಲ್ಲಿ ಸಮಗ್ರ ರಾವಣ ಪ್ರದರ್ಶನ ನೀಡುತ್ತಿದ್ದಾಗ ಈ ಅಪರೂಪದ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದ್ದರು. ನಾನು ನೋಡಿದ ೧೯೮೭ರ ಒಂದು ಪ್ರದರ್ಶನದಲ್ಲಿ ಬಿಳಿಯೂರು ಕ್ರಿಶ್ಣಮೂರ್ತಿಯವರು ವಾಲಿಯಾಗಿಯೂ, ಜಲವಳ್ಳಿಯವರು ರಾವಣನಾಗಿಯೂ ಅಭಿನಯಿಸಿದ್ದರು.

ಇಲ್ಲಿ ನಾನು ಅಗತ್ಯವಾಗಿ ಹಂಚಿಕೊಳ್ಳಬೇಕಾದ್ದೆಂದರೆ ನಾವಡರ ಕೆಲವು ಅಪರೂಪದ ಹಾಡುಗಳು. ಈ ಮಟ್ಟಿನ ಹಾಡು ನನಗೆ ತಿಳಿದಂತೆ ನಾವಡರ ಅಮ್ರುತಮತಿ ಕ್ಯಾಸೆಟ್ಟಿನಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಂಡಿದೆ. ಮಗ ಅಂಗದನನ್ನು ವಾಲಿ ಮುದ್ದಿಸುವ, ರಾವಣ ನಾಚಿ ತಲೆತಗ್ಗಿಸುವ ಸನ್ನಿವೇಶಗಳ ಅಪರೂಪದ ಹಾಡುಗಳನ್ನು ಕೇಳಿ.

ಇಂಥಹ ಅಪರೂಪದ ನಾವಡ ಸ್ಟೈಲ್ ಒಂದೇ ಎರಡೇ! ಅದ್ದರಿಂದಲೇ ಆತ ನಿಜ ಅರ್ಥದಲ್ಲಿ ಯಕ್ಶಗಾನ ಭಾಗವತಿಕೆಯ ಯುಗ ಪ್ರವರ್ತಕ! ನೆಬ್ಬೂರರ ಬಗ್ಗೆ, ಕಡತೋಕರ ಬಗ್ಗೆ, ಯಾಜಿ ಭಾಗವತ ಬಗ್ಗೆ ಪುಸ್ತಕಗಳು ಬಂದಿವೆ. ಭಾಗವತಿಕೆಯ ಯುಗ ಪ್ರವರ್ತಕನ ಜೀವನ, ಸಾಧನೆಗಳ ಪುಸ್ತಕ ಬರದಿರುವುದು ಆಶ್ಚರ್ಯವೂ ಹೌದು, ಕಲಾಪ್ರೇಮಿಗಳು ತಲೆತಗ್ಗಿಸಬೇಕಾದ ವಿಷಯವೂ ಹೌದು.