Sunday, July 3, 2011

ಕೃಷ್ಣಾರ್ಜುನ- ದುಷ್ಟಬುದ್ಧಿ - ಆಲಸಿಯಾದ ಅರ್ಜುನ, ನೀರಸನಾದ ದುಷ್ಟಬುದ್ಧಿ, ಮೋಹಕವಾಗಿ ಮೊಳಗಿದ ರಾಘವೇಂದ್ರ

ಸಾಲಿಗ್ರಾಮ ಮೇಳದವರಿಂದ ಬೆಂಗಳೂರಿನಲ್ಲಿ ಪ್ರದರ್ಶಿತವಾದ ಹಗಲು ಯಕ್ಶಗಾನ 'ಕೃಷ್ಣಾರ್ಜುನ- ದುಷ್ಟಬುದ್ಧಿ - ಯಕ್ಷಗಾನದ ಹಳೆಯ ತಲೆಗಳು ಆಲಸಿಗಳಾದರೂ ಹೊಸ ತಲೆಮಾರು ಭರವಸೆ ಮೂಡಿಸಿದ ಪ್ರದರ್ಶನ.

ಯಾಜಿಯವರ ಅರ್ಜುನನ ಪಾತ್ರ ನೀರಸವಾಗಿತ್ತು. ಈ ಪ್ರಸಂಗಕ್ಕೆ 'ಆಲಸಿ ಅರ್ಜುನ' ಎಂದು ನಾಮಕರಣ ಮಾಡಬಹುದಿತ್ತು. ಮಾನಿನಿ ಮಣಿಯೆ ಪದ್ಯಕ್ಕೆ ಕೂಡಾ ನ್ರುತ್ಯ ಮಾಡಲಾರದಷ್ಟು ಆಲಸ್ಯ ಈ ಅರ್ಜುನನಿಗೆ. ರವೀಂದ್ರ ಶೆಟ್ಟಿಯವರ ಭಾಮಿನಿ ಪದ್ಯಕ್ಕೆ ಧ್ವನಿಗೂಡಿಸಿದ ಯಾಜಿಯವರು ಇನ್ನೊಂದು ರಾಗದಿಂದ ಪದ್ಯದ ಚರಣವನ್ನೆತ್ತಿ ಆಭಾಸಕ್ಕೀಡಾದರು. ರವೀಂದ್ರ ಶೆಟ್ಟಿಯವರು ಹೊಸ ರಾಗಕ್ಕೆ ತಕ್ಶಣ ತಿರುಗಿ ಮತ್ತಷ್ಟು ರಂಗಾಭಾಸವಾಗುವದನ್ನು ತಪ್ಪಿಸಿದರು. ಮನೋಹರ ಕುಮಾರರ ತೆಂಕಿನ ಕೃಷ್ಣನ ಬಗ್ಗೆ ಬರೆಯದಿರುವುದೇ ಲೇಸು. ರವೀಂದ್ರ ಶೆಟ್ಟಿ ಭಾಗವತಿಕೆ ಮಾಡದಿದ್ದರೆ ಯಕ್ಶಗಾನಕ್ಕೆ ಅದೇ ದೊಡ್ಡ ಕೊಡುಗೆ. ಹೊಸ ಪರಿಚಯ ಆನಂದ ಕುಮಾರ ಅಂಕೋಲ ಭಾಗವತರಾಗಿ ಭರವಸೆ ಮೂಡಿಸಿದ್ದಾರೆ. ಸುಭದ್ರೆಯಾಗಿ ಶಶಿಕಾಂತ, ರುಕ್ಮಿಣಿಯಾಗಿ ಉಳ್ಳೂರು, ದಾರುಕನಾಗಿ ಹಳ್ಳಾಡಿ ಪರವಾಗಿಲ್ಲ ಎಂಬ ಅಭಿಪ್ರಾಯ ಮೂಡಿಸಿತು.

ದುಷ್ಟಬುದ್ಧಿಯಾಗಿ ಕೊಂಡದಕುಳಿ- ಆರಂಭದ ದ್ರುಶ್ಯಗಳನ್ನು ಕೈಬಿಟ್ಟಿದ್ದರಿಂದಲೋ ಏನೋ ಮಿಂಚಲಿಲ್ಲ. ಬಹುಶ: ಕೊಂಡದಕುಳಿಯವರ ಮನೋಧರ್ಮಕ್ಕೆ ಹೊಂದುವ ಪಾತ್ರವೂ ಇದಲ್ಲ. ದುಷ್ಟಬುದ್ಧಿಯ ಕಪಟ, ಸ್ವಾರ್ಥಗಳ ಅಭುವ್ಯಕ್ತಿಯಲ್ಲಿ ಕೊಂಡದಕುಳಿ ಸೋತಿದ್ದಾರೆ. ಶಂಭು ಹೆಗಡೆಯವರ ಅನುಕರಣೆ ಮಾಡುತ್ತಾ ಮುಂಭಾಗದ ಹಲ್ಲುಗಳೆರಡಕ್ಕೆ ಕಪ್ಪು ಬಣ್ಣ ಬಳಿದಷ್ಟಕ್ಕೆ ಪಾತ್ರ ದುಷ್ಟಬುದ್ಧಿಯದ್ದಾಗುವುದಿಲ್ಲವಶ್ಟೆ! ಇನ್ನು ದುಷ್ಟಬುದ್ಧಿ ವಯಸ್ಸಾದವನು ಎಂಬುದನ್ನು ತೋರಿಸುವ ಬಿಳಿ ಕೇಶರಾಶಿಯ ವೇಶ ಯಕ್ಶಗಾನದ ಯಾವ ಪರಂಪರೆ ಎಂಬ ಪ್ರಶ್ಣೆ ಮೂಡಿಸಿತು.ವಿಷಯೆಯಾಗಿ ಬೇಗಾರ್, ಚಂದ್ರಹಾಸನಾಗಿ ಹುಡಗೋದು ಮಿಂಚಿದರು. ಮದನನ ಪಾತ್ರ ರಮೇಶ ಭಂಡಾರಿಯವರಿಂದಾಗಿ ಅಪಹಾಸ್ಯಕ್ಕೀಡಾಯಿತು., ಮುಖ್ಯವಾಗಿ ಈ ಪ್ರಸಂಗದಲ್ಲಿ ಮಿಂಚಿ ಭಾರೀ ಭರವಸೆ ಮೂಡಿಸಿದವರು ಭಾಗವತ ರಾಘವೆಂದ್ರ ಅಚಾರಿಯವರು.

ಇಂದು ಭಾಗವತಿಕೆಯ ನಾವಡೀಕರಣದ ಉತ್ಕ್ರುಷ್ಟ ಅಭಿವ್ಯಕ್ತಿಯ ಮುಂಚೂಣಿಯಲ್ಲಿರುವವರೆಂದರೆ ರಾಘವೆಂದ್ರ ಆಚಾರಿಯವರು. ಉನ್ನತ ಕಂಠ, ರಾಗ, ತಾಳಗಳ ಹಿಡಿತ ಕಾಳಿಂಗ ನಾವಡರ ನೆನಪು ಮೂಡಿಸಿತು. ಚಂದ್ರಹಾಸನ 'ಅಮಮ ಏನು ಸೊಬಗು' ಪದ್ಯ ಮಧ್ಯಮಾವತಿಯಲ್ಲಿ ಅತ್ಯಂತ ಸುಂದರವಾಗಿ ಮೂಡಿ ಬಂತು. ಪ್ರೇಕ್ಶಕರಿಗೆ ಕೊಟ್ಟ ಹಣ ಈ ಪದ್ಯವೊಂದರಿಂದಲ್ಲೇ ವಾಪಾಸ್ ಬಂದ ಅಪೂರ್ವ ಅನುಭವ. ಪ್ರಸ್ತುತ ಯಕ್ಶಗಾನ ರಂಗದಲ್ಲಿ ಕಾಳಿಂಗ ನಾವಡ, ಧಾರೇಶ್ವರರ ಸಾಲಿಗೆ ಸೇರಬಲ್ಲ ಯೋಗ್ಯತೆಯುಲ್ಲ ಈ ಯುವ ಪ್ರತಿಭಾವಂತ ಭಾಗವತನಿಗೆ ಶುಭ ಕೋರುತ್ತಾ.....

No comments: