ಹೇರಂಜಾಲು ಸಂಯೋಜನೆಯ ಕಾರ್ತವೀರ್ಯ-ಭಾರ್ಗವ ವಿಜಯ-ದ್ರೌಪದಿ ವಸ್ತ್ರಾಪಹಾರ-ಗದಾಯುದ್ಧ
ಕಾರ್ತವೀರ್ಯ ಪ್ರಸಂಗದಲ್ಲಿ ಚಿಟ್ಟಾಣಿಯವರು ಮೊದಲನೆಯ ಕಾರ್ತವೀರ್ಯನಾಗಿ ನಿರೀಕ್ಶೆಗೆ ಮೀರಿದ ಪ್ರದರ್ಶನ ನೀಡಿ, ಯಕ್ಶರಂಗದಲ್ಲಿ ಚಿಟ್ಟಾಣಿ ಒಂದು ವಿಸ್ಮಯ ಎಂಬ ಮಾತಿಗೆ ಈ ಇಳಿವಯಸ್ಸಿನಲ್ಲೂ ಪುರಾವೆ ಒದಗಿಸಿದರು. ಚಿಟ್ಟಾಣಿ ರಂಗದಿಂದ ನಿರ್ಗಮಿಸಿದ ನಂತರ ರಂಗ ನೀರಸ. ಕೊಂಡದಕುಳಿ ರಾವಣನಾಗಿ ವಿಫಲ. ಖಳಕುಲೇಶ್ವರ ನಗುತ ಎಂಬ ಅಬ್ಬರದ ರಾವಣನ ಪ್ರವೇಶದಲ್ಲೂ ಕೊಂಡದಕುಳಿಯವರು ಯಾವ ಪ್ರಭಾವವನ್ನೂ ಬೀರಲಿಲ್ಲ. ’ದೀಪಾವಳಿ, ದಿವಾಳಿ’ ಮುಂತಾದ ಶಬ್ದ ಪ್ರಯೋಗ ಮಾಡಿದ ಕೊಂಡದಕುಳಿಯವರು ತಮ್ಮ ಹಾಸ್ಯಕ್ಕೆ ತಾವೇ ನಕ್ಕು ರಂಗಾಭಾಸ ಮಾಡಿದ್ದು ಶೋಚನೀಯ. ಎರಡನೆಯ ಕಾರ್ತವೀರ್ಯ (ಕೋಡಿ ವಿಶ್ವನಾಥ?)ನ ಪಾತ್ರ ಹವ್ಯಾಸಿ ಕಲಾವಿದರ ಮಟ್ಟಕ್ಕೂ ಏರಲಿಲ್ಲ. ಈ ಪಾತ್ರಧಾರಿ ಹೆಚ್ಚೆಂದರೆ ದೇವೇಂದ್ರ ಅಥವಾ ಕ್ರುತವೀರ್ಯ ಇತ್ಯಾದಿ ಪೋಶಕ ಪಾತ್ರಗಳಿಗೆ ಲಾಯಖ್ಖು. ಕಲಾವಿದನ ತಪ್ಪಲ್ಲ. ಸಂಘಟಕರು ಯೋಚಿಸಬೇಕು. ಅರುವತ್ತನಾಲ್ಕು ಕಲಾವಿದರ ಸಮಾವೇಶದಲ್ಲಿ ಈ ಪಾತ್ರ ಮಾಡಬಲ್ಲ ಸಮರ್ಥ ವೇಶಧಾರಿ ಇರಲಿಲ್ಲವೇ? ಈ ಪ್ರಸಂಗದಲ್ಲಿ ಭಾಗವತರಾಗಿ ಕೊಳಗಿ ಮತ್ತು ಹೇರಂಜಾಲು ಸಂಪೂರ್ಣ ವಿಫಲರಾದರು. ಕಾಳಿಂಗ ನಾವಡ ಹಾಗೂ ಧಾರೇಶ್ವರರು ಮೆರೆಸಿದ ಈ ಪ್ರಸಂಗವನ್ನು ಕಳೆಗಟ್ಟಿಸುವ ಹೊಸ ಭಾಗವತರಿಗೆ ರಂಗ ಮತ್ತು ಪ್ರೇಕ್ಶಕ ವರ್ಗ ಕಾದಿದೆ. ಹೇರಂಜಾಲು ಅವರ ಧ್ವನಿಯ ಮುಂದೆ ಕೊಳಗಿಯವರ ಧ್ವನಿ ಕೇಳಿಸಲೇ ಇಲ್ಲ.
ಸಮಯದ ಕೊರತೆಯಿಂದ ಭಾರ್ಗವ ವಿಜಯ ಪ್ರಸಂಗ ಕರಪತ್ರಕ್ಕೆ ಸೀಮಿತವಾಯಿತು. ಯಾವ ಪ್ರೇಕ್ಶಕನಿಗೂ ಆ ಪ್ರಸಂಗ ಬೇಕಾಗಿರಲಿಲ್ಲ ಎಂಬುದು ಬೇರೆ ಮಾತು. ಕಾರ್ತವೀರ್ಯ ಪ್ರಸಂಗದ ನಡುವೆ ನಲುವತ್ತೈದು ನಿಮಿಶಗಳ ಸಭಾ ಕಾರ್ಯಕ್ರಮ. ಬೆಂಗಳೂರು ಯಕ್ಷಗಾನ ಪ್ರದರ್ಶನಗಳಲ್ಲಿ ಇದು ನಿತ್ಯ ಗೋಳು. ಯಕ್ಶಗಾನ ಕನ್ನಡದ ಗಂಡು ಕಲೆ, ಅದ್ಭುತ ಕಲೆ ಎಂದು ಯಾರಿಂದಲೋ ಹೇಳಿಸುವುದು, ತಾಳ್ಮೆ ತಪ್ಪಿದ ಪ್ರೇಕ್ಶಕರ ಚಪ್ಪಾಳೆಯನ್ನು ಪ್ರೋತ್ಸಾಹವೆಂದು ಸಂಘಟಕರು ಬೀಗುವುದು.. ಇದಕ್ಕೆಲ್ಲಿಯ ಕೊನೆ?
ದ್ರೌಪದಿ ವಸ್ತ್ರಾಪಹಾರ ಅಮ್ಮಣ್ಣಾಯರಿಗೇ ಮೀಸಲಾದ ಪ್ರಸಂಗ. ಈ ಪ್ರಸಂಗದಲ್ಲಿ ಅವರಂತೆ ಹಾಡುವ ಭಾಗವತರಿಲ್ಲ. ಅಮ್ಮಣ್ಣಾಯರು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲವಾದರೂ ಅವರ ಹಾಡುಗಾರಿಕೆ ಅವರದೇ ದಾಖಲೆಗಳಿಗಿಂತ ಹಿಂದೆ ಉಳಿಯಿತು. ಉಳಿದ ಭಾಗವತರಿಗೆ ಈ ಪ್ರಸಂಗದಲ್ಲಿ ಈ ಮಟ್ಟವನ್ನು ಮುಟ್ಟುವುದೂ ಸಾಧ್ಯವಿಲ್ಲ. ಆದ್ದರಿಂದ ಭಾಗವತಿಕೆ ಸಫ಼ಲ. ಕೋಳ್ಯೂರು ಅವರ ದ್ರೌಪದಿ ಉತ್ಕೃಷ್ಟ. ಸುನ್ನಂಬಳ ಅವರ ಕೌರವ ಪಾತ್ರೋಚಿತವಾಗಿ ಕಳೆಗಟ್ಟಿತ್ತು. ಮಧೂರು ನಾವಡರ ದುಶ್ಯಾಸನ ಸಮಯದ ಕೊರತೆಯ ನಡುವೆಯೂ ಆಕರ್ಶಕವಾಗಿ ಮೂಡಿ ಬಂತು.
ಕೊನೆಯ ಪ್ರಸಂಗ ಗದಾಯುದ್ಧ ಆರಂಭವಾದಾಗ ಬೆಳಗಿನ ಜಾವ ನಾಲ್ಕೂವರೆ. ಯುವ ಭಾಗವತರಾದ ರಾಘವೆಂದ್ರ ಆಚಾರಿ ಮತ್ತು ಸುಬ್ರಮಣ್ಯ ಆಚಾರಿಯವರ ದ್ವಂದ್ವ ಗಾಯನದಲ್ಲಿ ಗೋಡೆಯವರ ಮೊದಲನೆಯ ಕೌರವ ರಸವತ್ತಾಗಿ ಮೂದಿ ಬಂತು. ಗೋಡೆಯವರು ಎಲ್ಲಾ ಪದ್ಯಗಳನ್ನು ಎತ್ತುಗಡೆ ಮಾಡಿ ಯುವ ಭಾಗವತರಿಗೆ ನೆರವಾದರು. ಯಕ್ಶರಂಗದಲ್ಲಿ ತಾರೆಯಾಗಿ ಮಿನುಗುವ ಎಲ್ಲ ಲಕ್ಶಣಗಳು ರಾಘವೇಂದ್ರ ಆಚಾರಿಯವರಲ್ಲಿದೆ. ಹಾಗಾಗಲಿ ಎಂಬ ಹಾರೈಕೆಯೊಂದಿಗೆ..
5 comments:
ಉತ್ತಮ ಲೇಖನಕ್ಕೆ ಧನ್ಯವಾದ.
ಕೊಳಗಿ ಹಾಗು ಹೆರಂಜಾಲರ ವಿಫಲತೆಯ ಬಗ್ಗೆ ಬರೆಯುವ ತಾವು ಪ್ರಸಂಗಗಳ ಹೆಸರನ್ನು ಸರಿಯಾಗಿ ನೋಡಿದ್ದರೆ ಒಳ್ಳೆಯದಿತ್ತು.ಯಾರು ಬರೆದ ದ್ರೌಪತಿಪ್ರತಾಪ ಪ್ರಸಂಗದಲ್ಲಿ ಕೌರವ,ದುಶ್ಯಾಸನ ಪಾರ್ತಗಳು ಬರುತ್ತವೆ?
ಮುಮ್ಮೇಳದ ಪಾರ್ತದಾರಿ ಪದ್ಯಗಳನ್ನ ಎತ್ತುಗಡೆ ಮಾಡುತ್ತಾರೆ ಎಂದಾದರೆ ಅದು ಭಾಗವತನ ಅನುಭವದ ಕೊರತೆ ಎಂದು ತರ್ಕಿಸಬಹುದೇ?
ನಿಮ್ಮ ವಿಮರ್ಷೆಯನ್ನ "ವ್ಯಕ್ತಿನಿಷ್ಟೆಗೆ" ಮೀಸಲಾಗಿಡದೆ ಬರೆದರೆ ಇನ್ನೂ ಒಳ್ಲೆಯದು ಎನ್ನುವುದು ನನ್ನ ಭಾವನೆ.
ಪ್ರಸಂಗ ದ್ರೌಪದಿ ವಸ್ತ್ರಾಪಹಾರ, ದ್ರೌಪದಿ ಪ್ರತಾಪ ಎಂಬ ಕಣ್ತಪ್ಪನ್ನು ಸರಿಪಡಿಸಿದ್ದೇನೆ. ಇನ್ನು ಪದ ಎತ್ತುಗಡೆಯ ಬಗ್ಗೆ ಇನ್ನೊಮ್ಮೆ ಬರೆದೇನು!
ಮಾನ್ಯರೆ, ನಿಮ್ಮ ಲೇಖನವನ್ನು ಅಕಸ್ಮಾತ್ ಓದಿದೆ, ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳದೆಯೆ ಅಥವಾ ವಿಮರ್ಶಿಸದೆ ಜಾಳು ಜಾಳಾಗಿ ಬರೆದಂತೆ ಅನ್ನಿಸಿತು. ಆ ದಿನ ಎರಡನೇ ಕಾರ್ತವೀರ್ಯನ ಪಾತ್ರವನ್ನು ನಿರ್ವಹಿಸಿದವರು ಐರಬೈಲು ಆನಂದ ಶೆಟ್ಟರು.(ಕೋಡಿ ವಿಶ್ವನಾಥ ಗಾಣಿಗರಲ್ಲ)
ಎರಡನೆಯ ಕಾರ್ತವೀರ್ಯ ಪಾತ್ರಧಾರಿ ಯಾರು ಎಂಬ ಅನುಮಾನವನ್ನು ನಾನು ಪ್ರಶ್ನಾರ್ಥಕ ಚಿಹ್ನೆಯ ಮೂಲಕ ವ್ಯಕ್ತಪಡಿಸಿರುತ್ತೇನೆ. ಕರಪತ್ರದಲ್ಲಿ ನಮೂದಿಸಿದಂತೆ ಎರಡನೆಯ ಕಾರ್ತವೀರ್ಯ ಕೋಡಿ ವಿಶ್ವನಾಥ. ಸಂಘಟಕರು ಈ ಬದಲಾವಣೆಯನ್ನು ಪ್ರೇಕ್ಶಕರ ಗಮನಕ್ಕೆ ತಾರದಿದ್ದುದು ಕಲಾವಿದನಿಗೂ, ಕಲೆಗೂ, ಪ್ರೇಕ್ಶಕನಿಗೂ ಮಾಡಿದ ಅಪಚಾರವೆಂದೇ ನನ್ನ ಭಾವನೆ.
ಒಬ್ಬ ಕಲಾವಿದನನ್ನ ಗುರುತಿಸಲಾಗದೆ,ಕೇವಲ ಕರಪತ್ರದ ಆಧಾರದಮೇಲೆ ಕಾರ್ಯಕ್ರಮದ ವಿಮರ್ಶೆ,ಜನಪ್ರೀಯ ಕಲಾವಿದರುಗಳಿಗೆ ಸಲಹೆ ಗಳನ್ನ ಕೊಡುವಷ್ಟರ ಮಟ್ಟಿಗೆ ಒಬ್ಬ ಪ್ರೇಕ್ಷಕ ಮುಂದುವರೆಯುವುದು ಯಕ್ಷಗಾನದಂತಹಾ ಕಲೆಯ ದುರಂತವೇ ಸರಿ.
Post a Comment